ಬೆಂಗಳೂರು,ಜೂ.10-ಜಿದ್ದಾಜಿದ್ದಿನ ಕಣವಾಗಿದ್ದ ರಾಜ್ಯಸಭೆಯ ನಾಲ್ಕು ಸ್ಥಾನಗಳ ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆದಿದ್ದು, ನಾಲ್ಕನೇ ಅಭ್ಯರ್ಥಿಯ ಗೆಲುವು ಯಾರಿಗೆ ದಕ್ಕಲಿದೆ ಎಂಬುದಷ್ಟೇ ಬಾಕಿ ಉಳಿದಿದೆ. ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್, ಚಿತ್ರನಟ ಜಗ್ಗೇಶ್, ಕಾಂಗ್ರೆಸ್‍ನ ಜೈರಾಮ್ ರಮೇಶ್ ಗೆಲುವು ಬಹುತೇಕ ಖಚಿತವಾಗಿದ್ದು, 4ನೇ ಸ್ಥಾನ ಯಾರಿಗೆ ಎಂಬುದು ಫಲಿತಾಂಶದ ನಂತರ ಗೊತ್ತಾಗಲಿದೆ.
ನಿರ್ಮಲಾಸೀತಾರಾಮನ್‍ಗೆ ಮೊದಲ ಪ್ರಾಶಸ್ತ್ಯದಲ್ಲಿ 46, ಜಗ್ಗೇಶ್ 44, ಕಾಂಗ್ರೆಸ್ ಜೈರಾಮ್ ರಮೇಶ್ ಅವರಿಗೆ 46 ಮತಗಳನ್ನು ಹಂಚಿಕೆ ಮಾಡಿದ್ದರಿಂದ ಈ ಮೂವರು ಮೊದಲ ಪ್ರಾಶಸ್ತ್ಯದಲ್ಲೇ ಗೆಲುವು ಸಾಸುವುದು ಖಚಿತವಾಗಿದೆ. ಆದರೆ ಇಡೀ ಚುನಾವಣೆಯ ಚಿತ್ತವನ್ನು ಕೆರಳಿಸಿರುವ 4ನೇ ಸ್ಥಾನ ಯಾರಿಗೆ ಎಂಬುದು ಮೀನಿನ ಹೆಜ್ಜೆಯಷ್ಟೇ ನಿಗೂಢವಾಗಿ ಉಳಿದಿದೆ. ಬಿಜೆಪಿ 3ನೇ ಅಭ್ಯರ್ಥಿ ಲೆಹರ್ ಸಿಂಗ್, ಕಾಂಗ್ರೆಸ್‍ನ 2ನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಮತ್ತು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.
ಬಿಜೆಪಿಯ 3ನೇ ಅಭ್ಯರ್ತಿ ಲೆಹರ್ ಸಿಂಗ್‍ಗೆ 32 ಮತಗಳು, ಜೆಡಿಎಸ್‍ನ ಕುಪೇಂದ್ರ ರೆಡ್ಡಿಗೆ 30 ಹಾಗೂ ಕಾಂಗ್ರೆಸ್‍ನ 2ನೇ ಅಭ್ಯರ್ಥಿ ಮನ್ಸೂರ್ ಖಾನ್‍ಗೆ 26 ಮತಗಳು ಲಭಿಸುವ ಸಂಭವವಿದೆ. ಬಿಜೆಪಿಯ 2ನೇ ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ಬಿಜೆಪಿಯ ಲೆಹರ್ ಸಿಂಗ್ ಗೆಲುವು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅಲ್ಲದೆ ಜೆಡಿಎಸ್ ಕೋಲಾರ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್‍ಗೆ ಮತ ಹಾಕಿರುವುದರಿಂದ ಕುಪೇಂದ್ರ ರೆಡ್ಡಿ ಗೆಲುವು ಕಷ್ಟಸಾಧ್ಯ ಎನ್ನಲಾಗುತ್ತಿದೆ.