ಹೂಡಲು ಬರೋದಿಲ್ಲ ಎಂದು ಮೈ ತೊಳೆದು ಹೊರಗೆ ಬಿಟ್ಟಿದ್ದ ಎತ್ತನ್ನು ತಂದು ಚುನಾವಣೆಗೆ ನಿಲ್ಲಿಸಿದ್ದಾರೆ ಎಂದು ವಾಯುವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಬಗ್ಗೆ ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ.
ಬುಧವಾರ ಬೆಳಗಾವಿಯಲ್ಲಿ ವಾಯುವ್ಯ ಶಿಕ್ಷಕ ಹಾಗೂ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಾರ್ಥ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್‌ನವರು ಯಾರೂ ಸಿಗಲಾರದಕ್ಕೆ ಕರೆದುಕೊಂಡು ಬಂದು ಪ್ರಕಾಶ ಹುಕ್ಕೇರಿ ನಿಲ್ಲಿಸಿದ್ದಾರೆ. ಹೆಗಲ ತೊಳದ ಎತ್ತನ್ನು ತಂದು ನಿಲ್ಲಿಸಿದ್ದಾರೆ. ೩೦ ಹೆಜ್ಜೆ ನಡಿ ಎಂದರೆ ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದರು.
೧೩ನೇ ತಾರೀಖು ನಡೆಯುವ ಚುನಾವಣೆಯಲ್ಲಿ ನೂರಕ್ಕೆ ನೂರು ಪದವೀಧರರು, ಶಿಕ್ಷಕರು ಮತ ಹಾಕಿ ಹಣಮಂತ ನಿರಾಣಿ ಹಾಗೂ ಅರುಣ ಶಾಹಪುರ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿ ವಿಧಾನಪರಿಷತ್‌ಗೆ ಕಳಿಸಿಕೊಡಬೇಕು. ತಾವಿಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ದ್ರೋಹ ಮಾಡದೇ ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ತಾವು ನೀಡುವ ಮತ ಈ ದೇಶದ ಪ್ರಧಾನಿ ಮೋದಿ ಹಾಗೂ ರಾಜ್ಯ ಸಿಎಂ ಬೊಮ್ಮಾಯಿ ಅವರ ಕೈಯನ್ನು ಬಲಪಡಿಸುತ್ತದೆ ಎಂದರು.