ಹುಬ್ಬಳ್ಳಿ: ನಗರದ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 15,820 ರೂ. ಹಣ ಮತ್ತು ದಾಖಲಾತಿಗಳನ್ನು ವಾರಸುದಾರರಿಗೆ ಹಿಂದಿರುಗಿಸಿ ಬಸ್ ಚಾಲಕ, ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಬಸ್ ನಿರ್ವಾಹಕ ಗುರುಸಿದ್ದಯ್ಯ ಜಿ. ಗೌಡರ್ ಮತ್ತು ಚಾಲಕ ಬಸವರಾಜ ಎನ್. ಬಾದಾಮಿ ರವರನ್ನು ವಾಕರಸಾಸಂಸ್ಥೆಯ ಹುಬ್ಬಳ್ಳಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ವಾಕರಸಾಸಂಸ್ಥೆಯ ಬಾಗಲಕೋಟೆ ವಿಭಾಗದ ಗುಳೇದಗುಡ್ಡ ಘಟಕಕ್ಕೆ ಸೇರಿದ ಕೆ.ಎ.29 ಎಫ್ 1251 ಸಂಖ್ಯೆಯ ಬಸ್ಸು ಜುಲೈ 2ರಂದು ಗುಳೇದಗುಡ್ಡ ದಿಂದ ಹುಬ್ಬಳ್ಳಿಗೆ ಬರುವಾಗ ಈ ಬಸ್ಸಿನಲ್ಲಿ ನವಲಗುಂದ ದಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿದ ಪ್ರಯಾಣಿಕರೊಬ್ಬರು ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಇಳಿಯುವಾಗ ತಮ್ಮ ಪರ್ಸನ್ನು ಬಸ್ಸಿನಲ್ಲಿಯೇ ಬಿಟ್ಟು ತೆರಳಿದ್ದರು. ನಂತರ ನಿರ್ವಾಹಕರು ಪ್ರಯಾಣಿಕರ ಆಸನದಲ್ಲಿ ಪರ್ಸ್ ಇರುವುದನ್ನು ಗಮನಿಸಿದ್ದಾರೆ.
ಪರ್ಸ್ ಪರಿಶೀಲಿಸಿದ ವೇಳೆ 15 ಸಾವಿರ ಹಣ ಹಾಗೂ ಮೂರು ಎಟಿಎಂ ಕಾರ್ಡ್ ಸೇರಿದಂತೆ ಕೆಲ ಮುಖ್ಯ ದಾಖಲೆಗಳು ಇರುವುದು ಕಂಡುಬಂದಿದೆ. ದಾಖಲೆಗಳಲ್ಲಿ ಪ್ರಯಾಣಿಕರ ಹೆಸರು, ದೂರವಾಣಿ ಸಂಖ್ಯೆ ಲಭ್ಯವಿಲ್ಲದ್ದರಿಂದ ಪರ್ಸ್ ನಲ್ಲಿದ್ದ ಎಟಿಎಂ ಕಾರ್ಡ್ ಮೂಲಕ ಹುನಗುಂದದ ಬ್ಯಾಂಕಿನಲ್ಲಿ ವಿಚಾರಿಸಿದ್ದಾರೆ. ಪ್ರಯಾಣಿಕರನ್ನು ತುಮಕೂರು ಮೂಲದ ಹಾಲಿ ಹುಬ್ಬಳ್ಳಿ ನಿವಾಸಿ ಬಿ.ಎನ್. ನಟರಾಜು ಎಂಬುದಾಗಿ ಪತ್ತೆ ಮಾಡಿ ಅವರಿಗೆ ಪರ್ಸ್ ಸಿಕ್ಕಿರುವ ವಿಚಾರವನ್ನು ತಿಳಿಸಿದ್ದರು.
ಹಣ ಕಳೆದುಕೊಂಡಿದ್ದ ಪ್ರಯಾಣಿಕರನ್ನು ಇಂದು ವಿಭಾಗ ಕಚೇರಿಗೆ ಕರೆಸಿ ನಿರ್ವಾಹಕರ ಮೂಲಕ ಹಿಂದಿರುಗಿಸಲಾಗಿಯಿತು. ಪ್ರಾಮಾಣಿಕತೆ ಮೆರೆದು ಇತರರಿಗೆ ಮಾದರಿಯಾದ ಚಾಲಕ ಮತ್ತು ನಿರ್ವಾಹಕರಿಗೆ ನಗದು ಬಹುಮಾನಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.