ಬೆಂಗಳೂರು: ಡ್ರಗ್ಸ್ ಪ್ರಕರಣದ ಬಗ್ಗೆ ಈಗ ನಾವು ಮಾತನಾಡುವುದು ಸರಿಯಲ್ಲ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಹೇಳಿದ್ದಾರೆ.ಕರ್ನಾಟಕ ಚಲನಚಿತ್ರ ವಾಣಿಕ್ಯ ಮಂಡಳಿ ಮತ್ತು ಕಲಾವಿದರು ಸೇರಿ ಇಂದು ಸಿಎಂ ಅವರನ್ನು ಭೇಟಿ ಮಾಡಿ ಚಿತ್ರರಂಗದ ಸಮಸ್ಯೆ ಬಗ್ಗೆ ಮಾತನಾಡಿದರು. ಈ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶಿವಣ್ಣ, ಡ್ರಗ್ ವಿಚಾರದಲ್ಲಿ ಈಗಲೇ ಮಾತನಾಡುವುದು ಬಹುಬೇಗ ಎನಿಸುತ್ತದೆ ಎಂದು ಹೇಳಿದರು
ಈಗ ಆ ವಿಚಾರ ನಮ್ಮ ಬಳಿ ಇಲ್ಲ. ಸಂಬಂಧಪಟ್ಟ ಇಲಾಖೆ ಅದನ್ನು ವಿಚಾರಣೆ ಮಾಡುತ್ತಿದೆ. ಕೇಂದ್ರ ಮತ್ತು ಸ್ಥಳೀಯ ಇಲಾಖೆಗಳು ವಿಚಾರಣೆ ಮಾಡುತ್ತಿವೆ. ಈ ಸಮಯದಲ್ಲಿ ಅದರ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ. ಅದು ಒಂದು ವ್ಯವಸ್ಥಿತವಾಗಿ ನಡೆದುಕೊಂಡು ಹೋಗುತ್ತಿದೆ. ಈ ಸಮಯದಲ್ಲಿ ನಾನು ಏನನ್ನೂ ಹೇಳುವುದಿಲ್ಲ. ದೇವರೊಬ್ಬ ಇದ್ದಾನೆ ಅವನು ನೋಡುತ್ತಿರುತ್ತಾನೆ ಅಲ್ಲವೇ ಎಂದು ಶಿವಣ್ಣ ತಿಳಿಸಿದ್ದಾರೆ.
ಲಾಕ್‍ಡೌನ್‍ನಿಂದ ಸಿನಿಮಾ ಕ್ಷೇತ್ರಕ್ಕೆ ನಷ್ಟ ಅಂತು ವಿಪರೀತ ಆಗಿದೆ. ಆದರೆ ಎಷ್ಟು ನಷ್ಟ ಆಗಿದೆ ಎಂದು ಅಂದಾಜು ಮಾಡಲು ನಾನೇನು ಬ್ಯುಸಿನೆಸ್‍ಮೆನ್ ಅಲ್ಲ. ನಾನೊಬ್ಬ ನಟ ಅಷ್ಟೆ. ಸಿನಿಮಾ ಥಿಯೇಟರ್ ಬಗ್ಗೆ ಚರ್ಚೆ ಮಾಡಿದ್ದೇವೆ. ಸಮಸ್ಯೆಗೆ ಬಗ್ಗೆ ಸಿಎಂ ಸ್ಪಂದಿಸಿದ್ದಾರೆ. ಥೀಯೇಟರ್ ಓಪನ್ ಬಗ್ಗೆ ಕೇಂದ್ರದ ಮಾರ್ಗಸೂಚಿಯಂತೆ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಶಿವಣ್ಣ ಹೇಳಿದ್ದಾರೆ.
ಸಿನಿಮಾ ಥೀಯೇಟರ್ ಓಪನ್ ಮಾಡುವುದು ದೊಡ್ಡದಲ್ಲ. ಆದರೆ ನಮ್ಮಲ್ಲಿ ಎಷ್ಟು ಜನ ನಿರ್ಮಾಪಕರು ರೆಡಿಯಾಗಿದ್ದಾರೆ ಎಂಬುದು ಮುಖ್ಯ. ಮೊದಲು ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಈಗಾಗಾಲೇ ಸುದೀಪ್, ಯಶ್, ವಿಜಯ್ ಸೇರಿದಂತೆ ಎಲ್ಲರೂ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ನಮ್ಮ ಸಮಸ್ಯೆ ಬಗ್ಗೆ ಸಿಎಂ ಬಳಿ ಕೇಳಿಕೊಂಡಿದ್ದೇವೆ. ಆ ಸಮಸ್ಯೆಗೆ ಪರಿಹಾರ ಒದಗಿಸುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ್ ಅವರು ಕೂಡ ನಮ್ಮ ಸಮಸ್ಯೆಯನ್ನು ಆಲಿಸಿದ್ದಾರೆ ಎಂದು ತಿಳಿಸಿದ್ದಾರೆ.