ಬೆಳಗಾವಿ: ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯವ್ಯ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಜೂನ್ 13ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸದಸ್ಯ ಹಣಮಂತ ನಿರಾಣಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯಕ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರಿಗೆ 2 ಸೆಟ್ ನಾಮಪತ್ರಗಳನ್ನು ಶುಕ್ರವಾರ ಸಲ್ಲಿಸಿದರು.
ಅವರಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮುಖಂಡ ಆರ್.ಎಸ್. ಮುತಾಲಿಕ್, ಪಕ್ಷದ ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ ಮೊದಲಾದವರು ಸಾಥ್ ನೀಡಿದರು.
‘ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಆಶೀರ್ವಾದದಿಂದ ಬಿಜೆಪಿ ಅಭ್ಯರ್ಥಿಯಾಗಿ, ಒಳ್ಳೆಯ ಮುಹೂರ್ತ ಸಿಕ್ಕಿದ್ದರಿಂದ ಸಾಂಕೇತಿಕವಾಗಿ ಉಮೇದುವಾರಿಕೆ ಸಲ್ಲಿಸಿದ್ದೇನೆ. ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಸೇರಿ ಮೇ 26ರಂದು ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸುತ್ತೇನೆ. ಪಕ್ಷ 2ನೇ ಬಾರಿಗೆ ಅವಕಾಶ ನೀಡಿದೆ. ಕ್ಷೇತ್ರದಾದ್ಯಂತ ಸಂಚರಿಸಿ ಎಲ್ಲರ ವಿಶ್ವಾಸ ಗಳಿಸಿದ್ದೇನೆ. ಮತ್ತೊಮ್ಮೆ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ’ ಎಂದು ಹಣಮಂತ ಹೇಳಿದರು.
‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಮೇ 21ರಂದು ನಗರದಲ್ಲಿ ಪಕ್ಷದ ಎಲ್ಲ ಹಿರಿಯರು, ನಾಯಕರ ಸಭೆ ಕರೆಯಲಾಗಿದೆ. ಚುನಾವಣೆ ಕುರಿತಂತೆ ಸುದೀರ್ಘ ಚರ್ಚೆ ನಡೆಸಲಾಗುವುದು. ಪಕ್ಷದಲ್ಲಿ ಭಿನ್ನಮತವೇನಿಲ್ಲ. ಜೋಶಿ ನೇತೃತ್ವದ ಸಭೆಗೆ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ನಾಯಕರೆಲ್ಲರೂ ಭಾಗವಹಿಸಲಿದ್ದಾರೆ. ಸಚಿವರು, ಶಾಸಕರು ಹಾಗೂ ಸಂಸದರು ಕೂಡ ಬರುತ್ತಾರೆ’ ಎಂದು ಪ್ರತಿಕ್ರಿಯಿಸಿದರು.