ರಾಯಚೂರು: ನವಜಾತ ಹೆಣ್ಣು ಶಿಶು ಸಾವನ್ನಪ್ಪಿದೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ಘೋಷಿಸಿದ ನಂತರ ಕುಟುಂಬ ಸದಸ್ಯರು ಅಂತ್ಯಕ್ರಿಯೆಗೆ ಮುಂದಾಗಿದ್ದಾರೆ. ಈ ವೇಳೆ ಮಗು ಉಸಿರಾಡುತ್ತಿರುವುದನ್ನು ಸಂಬಂಧಿಕರು ಗಮನಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿರುವ ಘಟನೆ ರಾಯಚೂರು ಜಿಲ್ಲೆಯ ತುರುವಿಹಾಳ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ?
ಮೇ 10 ರಂದು ತುರುವಿಹಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಈರಪ್ಪ ಮತ್ತು ಅಮರಮ್ಮ ದಂಪತಿಗೆ ಹೆಣ್ಣು ಮಗುವಾಗಿತ್ತು. ಆದರೆ ಮಗುವಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇತ್ತು. ಹೀಗಾಗಿ ಮಗುವನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಪೋಷಕರಿಗೆ ಸೂಚಿಸಿದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ ಎಂದು ಪೋಷಕರು ಅದೇ ದಿನ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು.
ಖಾಸಗಿ ಆಸ್ಪತ್ರೆಯ ವೈದ್ಯರು ಮಗುವನ್ನು ದಾಖಲಿಸಿಕೊಂಡು ಮೂರ್ನಾಲ್ಕು ದಿನ ಚಿಕಿತ್ಸೆ ನೀಡಿದ್ದಾರೆ. ಇಲ್ಲಿ ಚಿಕಿತ್ಸೆಗಾಗಿ ದಿನಕ್ಕೆ 10,000 ದಿಂದ 12,000 ರೂ. ಹಣ ತೆಗೆದುಕೊಂಡಿದ್ದಾರೆ. ಆದರೂ, ಆಸ್ಪತ್ರೆಯ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದರು.
ಮಗು ಮೃತಪಟ್ಟಿರುವ ವಿಷಯ ತಿಳಿದ ಪೋಷಕರು ತುರುವಿಹಾಳ ಗ್ರಾಮಕ್ಕೆ ಮೇ 14ರಂದು ಕರೆದೊಯ್ದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿತ್ತು. ಇದೇ ವೇಳೆ ಸ್ಮಶಾನದಲ್ಲಿ ಮಗು ಉಸಿರಾಡುತ್ತಿರುವುದನ್ನು ಗಮನಿಸಿದ ಸಂಬಂಧಿಕರೊಬ್ಬರು ಕೂಡಲೇ ಸಿಂಧನೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದೀಗ ಮಗು ಚಿಕಿತ್ಸೆ ಪಡೆಯುತ್ತಿದೆ.