ಬೆಂಗಳೂರು : ಪಿಂಚಣಿದಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಪಿಂಚಣಿ ಮಂಜೂರಾತಿಗೆ ‘ಹಲೋ ಕಂದಾಯ ಸಚಿವರೇ’ ಎಂಬ ಸಹಾಯವಾಣಿ ಆರಂಭಿಸಿದ್ದು, ಅರ್ಜಿ ಸಲ್ಲಿಸಿದ 72 ಗಂಟೆ ಒಳಗಾಗಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ತಲುಪಿಸುವ ಯೋಜನೆಗೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಇಂದು ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಹಲೋ ಕಂದಾಯ ಸಚಿವರೇ ಹೆಸರಿನ ಸಹಾಯವಾಣಿ ಸೇವೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಈ ಸಂಬಂಧ ಮಧ್ಯಾಹ್ನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಂದಾಯ ಇಲಾಖೆಯಲ್ಲಿ ಸಾಮಾಜಿಕ ಪಿಂಚಣಿ ಯೋಜನೆಯಡಿ ವೃದ್ದರು, ಅಂಗವಿಕಲರು, ವಿಚ್ಛೇದಿತ ಮಹಿಳೆಯರು ಸೇರಿ 9 ರೀತಿಯ ಮಾಸಿಕ ಪಿಂಚಣಿ ಯೋಜನೆಗಳು ಚಾಲ್ತಿಯಲ್ಲಿವೆ.
ಪಿಂಚಣಿ ಸೌಲಭ್ಯ ಪಡೆಯುವುದು ಹೇಗೆ?
ನಾಗರಿಕರು ಶುಲ್ಕ ರಹಿತ ಸಂಖ್ಯೆ 155245ಗೆ ಉಚಿತವಾಗಿ ದೂರವಾಣಿ ಮೂಲಕ ಕಡ್ಡಾಯವಾಗಿ ತಮ್ಮ ಆಧಾರ್ ಸಂಖ್ಯೆ ಒದಗಿಸಿ ಪಿಂಚಣಿ ಸೌಲಭ್ಯ ಕೋರಿಕೆ ಸಲ್ಲಿಸಬಹುದು
ತಮ್ಮ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆ ಬಾಗಿಲಿಗೆ ಭೇಟಿ ನೀಡಿ `ನವೋದಯ’ ಮೊಬೈಲ್ ಆಯಪ್ ಮೂಲಕ ಅರ್ಜಿದಾರರಿಂದ ಮಾಹಿತಿ ಹಾಗೂ ದಾಖಲಾತಿಗಳ ಸಂಗ್ರಹ.
ಗ್ರಾಮ ಲೆಕ್ಕಾಧಿಕಾರಿಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಲ್ಲಿಸಬೇಕಾದ ದಾಖಲೆಗಳು
ಕಡ್ಡಾಯವಾಗಿ ಆಧಾರ್ ಕಾರ್ಡ್
ಬ್ಯಾಂಕ್/ ಅಂಚೆ ಖಾತೆ ವಿವರದ ಪ್ರತಿ
ವಿಳಾಸ ಮತ್ತು ವಯಸ್ಸಿಗೆ ಸಂಬಂಧಿಸಿದ ದಾಖಲಾತಿ (ಪಡಿತರ ಚೀಟಿ, ಚುನಾವಣೆ ಗುರುತಿನ ಚೀಟಿ ಅಥವಾ ಸರ್ಕಾರ ವಿತರಿಸಿದ ಗುರುತಿನ ಚೀಟಿ)
ಮೊಬೈಲ್ ಆಯಪ್ ಮೂಲಕ ಭಾವಚಿತ್ರ ಸೆರೆಹಿಡಿಯವುದು
ಅರ್ಹರಿಗೆ 72 ಗಂಟೆಯೊಳಗೆ ನಾಡ ಕಚೇರಿ ಉಪ ತಹಸೀಲ್ದಾರರಿಂದ ಪಿಂಚಣಿ ಮಂಜೂರಾತಿ ಅನುಮೋದನೆ
ಫಲಾನುಭವಿಗಳ ಮನೆಬಾಗಿಲಿಗೆ ಪಿಂಚಣಿ ಮಂಜೂರಾತಿ ಆದೇಶ ವಿತರಣೆ ಮಾಡಲಾಗುವುದು.