ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮ ಇದೀಗ ಖಾಕಿ ಸುತ್ತಲೂ ಸುತ್ತುವರಿಯೋಕೆ ಮುಂದಾಗಿದೆ. ಅಕ್ರಮದಲ್ಲಿ ಭಾಗಿಯಾಗಿದ್ದ ಕೆಎಸ್‍ಆರ್‍ಪಿ ಕಮಾಂಡೆಂಟ್ ವೈಜನಾಥ್ ರೇವೂರ್ ರನ್ನ ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳು ಏಳು ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ ಅಕ್ರಮಕ್ಕೆ ಸಾಥ್ ನೀಡಿದ ಆರೋಪದಲ್ಲಿ 10 ಜನ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಪಿಎಸ್‍ಐ ಹಗರಣದ ಒಂದೊಂದೇ ರಹಸ್ಯ ಬಯಲಾಗ್ತಿದ್ದಂತೆ ಅಲರ್ಟ್ ಆದ ಸಿಐಡಿ ಅಕ್ರಮಕ್ಕೆ ಕುಮ್ಮಕ್ಕು ನೀಡಿದ ಪೊಲೀಸ್ ಅಧಿಕಾರಿಗಳ ಬುಡಕ್ಕೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಕಲಬುರಗಿಯಲ್ಲಿ ಕೆಎಸ್‍ಆರ್‍ಪಿ ಕಮಾಂಡೆಂಟ್ ಆಗಿರುವ ವೈಜನಾಥ್ ರೇವೂರ್‍ರನ್ನು ಸಿಐಡಿ ಬಂಧಿಸಿದ್ದು, 7 ದಿನ ಕಸ್ಟಡಿಗೆ ತೆಗೆದುಕೊಂಡಿದೆ. ಅಕ್ರಮ ನೇಮಕಾತಿಯ ಕಿಂಗ್‍ಪಿನ್ ಆರ್‍ಡಿಪಾಟೀಲ್ ಜೊತೆ ವೈಜನಾಥ್ ರೇವೂರ್ ಶಾಮೀಲಾಗಿದ್ದು, ತನಿಖೆಯಲ್ಲಿ ಬಯಲಾಗಿತ್ತು. ದುರಂತ ಅಂದ್ರೆ ಸಿಐಡಿ ಅಧಿಕಾರಿಗಳು ಬಂಧಿಸಿರುವ ವೈಜನಾಥ್ ರೇವೂರ್‍ನ ಪತ್ನಿ ಜೈಲರ್ ಆಗಿದ್ದಾರೆ. ವೈಜನಾಥ್ ಪತ್ನಿ ಸುನಂದಾ ವೈಜನಾಥ್ ರೇವೂರ್ ಕಲಬುರಗಿಯ ಸೆಂಟ್ರಲ್ ಜೈಲ್‍ನಲ್ಲಿ ಜೈಲರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಆರೋಪಿ ಪತಿಯನ್ನೇ ಜೈಲಿಗಟ್ಟಬೇಕಾದ ಪರಿಸ್ಥಿತಿ ಜೈಲರ್ ಪತ್ನಿಗೆ ನಿರ್ಮಾಣವಾಗಿದೆ.