ಬೆಂಗಳೂರು : ರಾಜ್ಯದ ಗೋಶಾಲೆಗಳಲ್ಲಿನ ಗೋವುಗಳನ್ನು 11,000 ರೂ.ಗಳ ವಾರ್ಷಿಕ ಮೊತ್ತಕ್ಕೆ ದತ್ತು ತೆಗೆದುಕೊಳ್ಳುವ ಪುಣ್ಯಕೋಟಿ ದತ್ತು ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಶನಿವಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಲಾಖೆಯ ವತಿಯಿಂದ ಕಿರುಚಿತ್ರ ಪ್ರದರ್ಶನ, ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಿಸಿ ಮಾತನಾಡಿದರು.
ಈ ಹಿಂದೆ ನಾನು ನನ್ನ ಹುಟ್ಟುಹಬ್ಬವನ್ನು ಅನಾಥಾಶ್ರಮಕ್ಕೆ ತೆರಳಿ ಮಕ್ಕಳಿಗೆ ದಾನಧರ್ಮ ಮಾಡುವ ಮೂಲಕ ಆಚರಿಸಿಕೊಳ್ಳುತ್ತಿದ್ದೆ. ಈ ಬಾರಿ ನಾನು 11 ಗೋವುಗಳನ್ನು ದತ್ತು ತೆಗೆದುಕೊಂಡು ಆಚರಿಸಿಕೊಂಡಿರುವುದನ್ನು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸ್ಮರಿಸಿದರು.
ರಾಜ್ಯದಲ್ಲಿ ಗೋವುಗಳನ್ನು ಗೋಮಾತೆ ಎಂದು ಪೂಜಿಸುವ ಲಕ್ಷಗಟ್ಟಲೆ ಜನರಿದ್ದಾರೆ. ಗೋವುಗಳ ಸೇವೆ ಪುಣ್ಯದ ಕೆಲಸವೆನ್ನುವ ಭಾವನೆ ನಮ್ಮಲ್ಲಿದೆ. ಈ ಯೋಜನೆಯಿಂದ ಗೋಶಾಲೆ ಹಾಗೂ ಗೋವುಗಳ ನಿರ್ವಹಣೆ ಸಾಧ್ಯವಾಗಲಿದೆ. ವಯಸ್ಸಾದ ಗೋವುಗಳ ನಿರ್ವಹಣೆಗೆ ಪರಿಹಾರ ಒದಗಿಸುವ ಸಕಾರಾತ್ಮಕ ಚಿಂತನೆಯಿಂದ ಈ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ಸಿಎಂ ಹೇಳಿದರು.