ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತ್ ನಿರ್ಮಾಣದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೊಡ್ಡ ಕೊಡುಗೆ ನೀಡಲಿವೆ ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ನಾರಾಯಣ ರಾಣೆ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಐಎಎಸ್ ಫೌಂಡೇಶನ್ ಹಮ್ಮಿಕೊಂಡಿದ್ದ 5ನೇ ಆವೃತ್ತಿಯ 2022ನೇ ಸಾಲಿನ ಭಾರತ ಉತ್ಪಾದನ ಪ್ರದರ್ಶನದ ಪೂರ್ವಭಾವಿ ಸಿದ್ಧತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಘು ಉದ್ಯೋಗ ಭಾರತಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.
ದೇಶದಲ್ಲಿ ಸುಮಾರು 12 ಕೋಟಿ ಜನರಿಗೆ ವಿವಿಧ ವಲಯಗಳಲ್ಲಿ ಉದ್ಯೋಗ ನೀಡಿದೆ. 6.3 ಲಕ್ಷ ಕೈಗಾರಿಕೆಗಳು ಈ ವಲಯದಲ್ಲಿವೆ. ದೇಶದ ಜಿಡಿಪಿಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕೊಡುಗೆ ನೀಡುತ್ತಿದ್ದು, ದೇಶದ ಆರ್ಥಿಕ ಪ್ರಗತಿ ವಿಚಾರದಲ್ಲಿ ಎಂಜಿನ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.