ಬೆಂಗಳೂರು: ಮುಖ್ಯಮಂತ್ರಿಯಾಗಲು 2,500 ಕೋಟಿ ರೂ. ಸಿದ್ಧವಿಟ್ಟುಕೊಳ್ಳಬೇಕು ಎಂಬುದಾಗಿ ದೆಹಲಿಯಿಂದ ಬಂದ ಕೆಲವರು ಹೇಳಿದ್ದರು’ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಸರಕಾರ ಹಾಗೂ ಬಿಜೆಪಿಗೆ ತೀವ್ರ ಮುಜುಗರಕ್ಕೀಡು ಮಾಡಿದ್ದು, ಜೆಪಿಯಲ್ಲಿ ರಾಜಕೀಯ ಗದ್ದಲ
ಆರಂಭಿಸಿದೆ, ತಮ್ಮ ಹೇಳಿಕೆಗೆ ಶಿಸ್ತು ಸಮಿತಿ ಮುಂದೆ ಉತ್ತರಿಸುವುದಾಗಿ ಯತ್ನಾಳ್ ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ನೀಡಿದ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿ ರಾಜ್ಯ ಸಮಿತಿ ಶಿಫಾರಸು ಮಾಡಿದೆ. ಯತ್ನಾಳ್ ಹೇಳಿಕೆ ಬಗ್ಗೆ ಕೇಂದ್ರ ಶಿಸ್ತು ಸಮಿತಿಗೆ ಮಾಹಿತಿ ರವಾನೆ ಮಾಡಲಾಗಿದೆ. ಹಲವು ಬಾರಿ ಮುಜುಗರದ ಹೇಳಿಕೆ ನೀಡಿರುವ ಬಗ್ಗೆ ವರದಿ ನೀಡಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಯತ್ನಾಳ್ ಹೇಳಿರುವ ಎಲ್ಲಾ ವಿಚಾರಗಳನ್ನು ಪಕ್ಷದ ಕೇಂದ್ರ ಶಿಸ್ತು ಸಮಿತಿಯ ಗಮನಕ್ಕೆ ತರಲಾಗಿದ್ದು, ವರಿಷ್ಠರಿಗೆ ಎಲ್ಲಾ ಮಾಹಿತಿ ನೀಡಲಾಗಿದೆ. ಅವರಿಂದ ಪರಿಪೂರ್ಣ ವಿವರಣೆ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು. ಅನಗತ್ಯ ಹೇಳಿಕೆ ನೀಡಿದ ಯತ್ನಾಳ್ ಅವರಿಗೆ ಈವರೆಗೆ ಎರಡು ಬಾರಿ ನೋಟಿಸ್ ಕೊಟ್ಟು, ವಿವರಣೆ ಪಡೆದುಕೊಳ್ಳಲಾಗಿದೆ. ಈ ಬಾರಿಯೂ ಶಿಸ್ತು ಸಮಿತಿ ಮೂಲಕ ನೋಟಿಸ್ ನೀಡಲಾಗುವುದು. ಉತ್ತರ ಬಂದ ನಂತರ ಕ್ರಮ ಜರುಗಿಸಲಾಗುತ್ತದೆ. ಬಿಜೆಪಿಯಲ್ಲಿ ದೊಡ್ಡವರು, ಸಣ್ಣವರು ಎನ್ನುವ ಪ್ರಶ್ನೆ ಇಲ್ಲ. ಎಲ್ಲರೂ ಶಿಸ್ತು ಸಮಿತಿಯ ವ್ಯಾಪ್ತಿಗೆ ಒಳಪಡುತ್ತಾರೆ’ ಎಂದರು.