ಅಂಕೋಲಾ: ನಕಲಿ ನೋಟು ಮತ್ತು ಅಸಲಿ ನೋಟು ವಿನಿಮಯ ಮಾಡುತ್ತಿರುವ ಸಂದರ್ಭದಲ್ಲಿ ಅಂಕೋಲಾ ಪೊಲೀಸರ ತಂಡ ದಾಳಿ ನಡೆಸಿ ನಾಲ್ವರನ್ನು ಬಂಧಿಸಿ ಅಂತಾರಾಜ್ಯ ಖೋಟಾ ನೋಟು ಚಲಾವಣೆ ಜಾಲದ ವ್ಯವಹಾರವನ್ನು ಬಯಲಿಗೆಳಿದ್ದಿದ್ದಾರೆ.
ಕಾರವಾರದ ಕೊಡಿಭಾಗದ ಹೋಟೆಲ್‌ನಲ್ಲಿ ಕೆಲಸಕ್ಕಿದ್ದ ಪ್ರವೀಣ್ ರಾಜನ ನಾಯರ್, ಗೋವಾ ರಾಜ್ಯದ ಮಡಗಾಂವ್ ನಿವಾಸಿ ಲೋಯ್ಡ್ ಲಾರೆನ್ಸ್ ಸ್ಟೇವಿಸ್, ಗೋವಾ ಪತ್ರೋಡಾದ ಲಾರ್ಸನ್ ಲೂಯಿಸ್ ಸಿಲ್ವಾ, ಮಡಗಾಂವ್ ಪ್ರನೋಯ ಫರ್ನಾಂಡಿಸ್ ಬಂಧಿತ ಆರೋಪಿಗಳು.
ಈ ಜಾಲದ ಪ್ರಮುಖ ಆರೋಪಿ ಕಾರವಾರದ ಕೋಡಿಬಾಗ ನಿವಾಸಿ ಮುಸ್ತಾಕ್ ಹಸನ್ ಬೇಗ್ ತಲೆ ಮರೆಸಿಕೊಂಡಿದ್ದಾನೆ.
ಜಿಲ್ಲೆಯಲ್ಲಿ ನಕಲಿ ನೋಟು ಜಾಲ ವ್ಯಾಪಿಸುತ್ತಿರುವ ಕಾರಣ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಮನ ಪೆನ್ನೇಕರರವರು ಅಂಕೋಲಾ ಸಿಪಿಐ ಸಂತೋಷ ಶೆಟ್ಟಿ ಮತ್ತು ಪಿಎಸ್‌ಐ ಪ್ರೇಮನಗೌಡ ಪಾಟೀಲ ಒಳಗೊಂಡ ತಂಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್, ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಖಚಿತ ಮಾಹಿತಿ ಮೆರೆಗೆ ಕಾರವಾರದ ಕೋಡಿಬಾಗದ ಭದ್ರಾ ಹೊಟೇಲ್ ಎದುರುಗಡೆ ಆರೋಪಿಗಳು ಖೋಟಾ ಮತ್ತು ಅಸಲಿ ನೋಟು ವಿನಿಮಯ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ಧಾರೆ. ಈ ವೇಳೆ ಒರ್ವ ಆರೋಪಿ ಪರಾರಿಯಾಗಿದ್ದಾನೆ.
ಈ ವೇಳೆ 500 ರೂ ಮುಖಬೆಲೆಯ 26 ನಕಲಿ ನೋಟು ಹಾಗೂ 500 ಮುಖ ಬೆಲೆಯ 40 ಅಸಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಜತೆಗೆ ಕೃತ್ಯಕ್ಕೆ ಬಳಸಿದ ಒಂದು ಸ್ಕೂಟರ್ ವಶಕ್ಕೆ ಪಡೆದಿದ್ದಾರೆ. ಪರಾರಿಯಾದ ಆರೋಪಿ ಪತ್ತೆಗೆ ಬಲೆ ಬಿಸಿದ್ದಾರೆ.