ಬೆಂಗಳೂರು, ಮೇ 6: ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ 532 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಕೈಗೆತ್ತಿಕೊಂಡಿರುವ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ 532 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡಿದೆ. ಮೂರು ವರ್ಷಗಳೊಗಳಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು.
ಅನುಭವ ಮಂಟಪ ಬಸವಣ್ಣನವರ ಕ್ರಾಂತಿಕಾರಿ ವೇದಿಕೆ. ಈ ಮಂಟಪದ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸವನ್ನು ಬಸವಣ್ಣನವರು ಮಾಡಿದ್ದಾರೆ. ಅವರು ಮಾಡಿರುವ ಸಾಮಾಜಿಕ ಕ್ರಾಂತಿಯನ್ನು ಪ್ರತಿಬಿಂಬಿಸುವ ರೂಪದಲ್ಲಿ ಅನುಭವ ಮಂಟಪ ನಿರ್ಮಾಣವಾಗಲಿದೆ. ಅನುಭವ ಮಂಟಪದಲ್ಲಿ 12ನೇ ಶತಮಾನದಲ್ಲಿ ಇದ್ದಂತಹ ವಚನಕಾರರು ದಾರ್ಶನಿಕ ಪುರುಷರ ಕುರಿತಾದ ಮಾಹಿತಿ ನೀಡುವಂತಹ ಕಿರು ಚಿತ್ರಗಳ ಪ್ರದರ್ಶನ, ಬಸವಣ್ಣನವರ ಜೀವನ ಸಾಧನೆ ಬಿಂಬಿಸುವ ಮಾಹಿತಿಗಳನ್ನು ಅನುಭವ ಮಂಟಪಕ್ಕೆ ಆಗಮಿಸುವ ಎಲ್ಲರಿಗೂ ವಿವರಿಸುವ ವ್ಯವಸ್ಥೆ ಈ ಅನುಭವ ಮಂಟಪದಲ್ಲಿ ಇರಲಿದೆ.