ಬೆಂಗಳೂರು: ಬಸವರಾಜ ಬೊಮ್ಮಾಯಿ ಸರ್ಕಾರದ ಸಂಪುಟ ಪುನಾರಚನೆ ಇನ್ನು ಒಂದೆರಡು ದಿನಗಳಲ್ಲಿ ನಡೆಯಲಿದೆ. ಹೀಗಾಗಿ ಮೇ 11 ರಂದು ಗುರುವಾರ ಸಂಪುಟ ಸಭೆ ನಿಗದಿಯಾಗಿದೆ.
ಸಂಪುಟ ಪುನಾರಚನೆ ಸಂಬಂಧ ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದರು.
ಸಿಎಂ ಬೊಮ್ಮಾಯಿ ಅವರ ಜೊತೆ ಯಾರ್ಯಾರನ್ನು ಕೈ ಬಿಡಬೇಕು ಮತ್ತು ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ವರದಿಯಾಗಿದೆ.
ಸಂಪುಟ ಪುನಾರಚನೆ ನಿರ್ಧಾರದೊಂದಿಗೆ ಅಮಿತ್ ಶಾ ಬೆಂಗಳೂರಿಗೆ ಬಂದಿದ್ದರು. ಇನ್ನು ಎರಡು ಮೂರು ದಿನಗಳಲ್ಲಿ ಸಂಪುಟ ಪುನಾರಚನೆಯಾಗಲಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮಂಗಳವಾರ ಹೇಳಿದ್ದರು.
ಸದ್ಯದಲ್ಲೇ ಪಟ್ಟಿ ಹೊರಬೀಳುವ ಸಾಧ್ಯತೆಯಿದೆ, ಶುಕ್ರವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಮುಗಿಸಿ ಮರಳಿದ ಬಳಿಕ ಬದಲಾವಣೆಗಳು ಆಗಬಹುದು. ಮೇ 10 ರ ಮೊದಲು ಹೊಸ ಮಂತ್ರಿಗಳ ಪ್ರಮಾಣ ವಚನವು ನಡೆಯಲಿದೆ ಎಂದು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.
ಕಂದಾಯ ಸಚಿವ ಆರ್.ಅಶೋಕ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಣ್ಣ ಕೈಗಾರಿಕೆ ಸಚಿವ ಎಂ.ಟಿ.ಬಿ.ನಾಗರಾಜ್, ವಸತಿ ಸಚಿವ ವಿ.ಸೋಮಣ್ಣ, ಮಹಿಳಾ ಅಭಿವೃದ್ಧಿ, ಮುಜರಾಯಿ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ ಎನ್ನಲಾಗಿದೆ. ಹಲವು ಕಾರಣಗಳಿಗಾಗಿ ಈ ಸಚಿವರನ್ನು ಸಂಪುಟದಿಂದ ಹೊರಗಿಡಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿವೆ.