ಬೆಂಗಳೂರು, ಮೇ. 02: ಮೂವರು ಪಿಎಸ್‌ಐ ಅಭ್ಯರ್ಥಿಗಳ ಅಕ್ರಮ ನೇಮಕದಲ್ಲಿ ಪ್ರಭಾವಿ ಸಚಿವರ ಸಹೋದರ ಕೈವಾಡ ಇರುವ ಅರೋಪ ಕೇಳಿ ಬಂದಿದೆ.
ಮಾಗಡಿ ಮೂಲದ ಮೂವರು ಅಭ್ಯರ್ಥಿಗಳು ಪಿಎಸ್‌ಐ ಆಗಿ ನೇಮಕವಾಗಿದ್ದರು. ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಕಂಡು ಬಂದ ಆರೋಪ ಕೇಳಿ ಬಂದಿತ್ತು.
ಇದರ ಬೆನ್ನಲ್ಲೇ ಬೆಂಗಳೂರಿನ ಏಳು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ 172 ಅಭ್ಯರ್ಥಿಗಳನ್ನು ಸಿಐಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ 22 ಪಿಎಸ್‌ಐ ಅಭ್ಯರ್ಥಿಗಳ ಒಎಂಆರ್ ಶೀಟ್ ನಲ್ಲಿ ಅಕ್ರಮ ನಡೆದಿರುವುದು ಕಂಡು ಬಂದಿತ್ತು. ಈ ಕುರಿತು ಎಫ್‌ಎಸ್ ಎಲ್ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸಹ ವರದಿ ನೀಡಿದ್ದರು. ವರದಿ ಬೆನ್ನಲ್ಲೇ 12 ಅಭ್ಯರ್ಥಿಗಳನ್ನು ಸಿಐಡಿ ಪೊಲೀಸರು ವಿಚಾರಣೆ ನಡೆಸಿದ್ದರು.
ಮಂತ್ರಿ ಸಹೋದರ ಶಾಮೀಲು:
ಮಾಗಡಿ ಮೂಲದ ದರ್ಶನ್ ಗೌಡ ಎಂಬಾತ ವಿಚಾರಣೆ ವೇಳೆ ಸಿಐಡಿ ಪೊಲೀಸರ ಮುಂದೆ ಅಕ್ರಮಕ್ಕೆ ಸಂಬಂಧಸಿದಂತೆ ಸ್ಫೋಟಕ ಮಾಹಿತಿ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ಪಿಎಸ್‌ಐ ನೇಮಕಾತಿ ತಾತ್ಕಾಲಿಕ ಅಯ್ಕೆ ಪಟ್ಟಿಯಲ್ಲಿ ದರ್ಶನ ಗೌಡ ನಾಲ್ಕನೇ ರ್‍ಯಾಂಕ್ ಗಳಿಸಿದ್ದ. ಮಂತ್ರಿಯೊಬ್ಬರ ಸಹೋದರ ನೆರವಿನಿಂದ ಪಿಎಸ್‌ಐ ಅಕ್ರಮದಲ್ಲಿ ಶಾಮೀಲಾಗಿ ಈ ರ್‍ಯಾಂಕ್ ಪಡೆದಿರುವ ಆರೋಪ ಕೇಳಿ ಬಂದಿದ್ದು, ಇದೀಗ ದರ್ಶನ್ ಗೌಡನನ್ನು ವಿಚಾರಣೆ ನಡೆಸಿದ್ದು, ಇದೀಗ ಆ ಮಂತ್ರಿ ಯಾರು ಮಂತ್ರಿ ಸಹೋದರ ಯಾರು ಎಂದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.
ಮಾಗಡಿ ಮೂಲದ ಮೂವರು ಅಭ್ಯರ್ಥಿಗಳು ಪಿಎಸ್‌ಐ ಆಗಿ ನೇಮಕವಾಗಿದ್ದು, ಈ ಮೂವರು ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪ ಕೇಳಿ ಬಂದಿದೆ. ಇನ್ನು ಬೆಂಗಳೂರಿನಲ್ಲಿ ನಡೆದ ಏಳು ಪರೀಕ್ಷಾ ಕೇಂದ್ರಗಳ ಸಿಸಿಟಿವಿ ದೃಶ್ಯ, ಆಯ್ಕೆಯದ ಅಭ್ಯರ್ಥಿಗಳ ಬಗ್ಗೆ ಮತ್ತಷ್ಟು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.