ಬೆಂಗಳೂರು: ಮಾರ್ಚ್ ಹಾಗೂ ಎಪ್ರಿಲ್‌ನಲ್ಲಿ ಉತ್ತರ ಭಾರತ ರಾಜ್ಯಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ನಷ್ಟು ಜಾಸ್ತಿಯಾಗಿದೆ.
ದಿಲ್ಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಸಿಗಾಳಿಯಿಂದ ಜನ ತತ್ತರಿಸಿದ್ದಾರೆ. ಅದರ ಪ್ರಭಾವ ರಾಜ್ಯದಲ್ಲೂ ಬೀರಲಿದೆ ಎಂಬ ಆತಂಕ ಮನೆಮಾಡಿತ್ತು.
ಆದರೆ, ಇದೇ ಸಮಯದಲ್ಲಿ ವರುಣನ ಆಗಮನ ಹಾಗೂ ಹವಾಮಾನ ತಜ್ಞರ ಮುನ್ಸೂಚನೆಯು ಜನರ ಆತಂಕವನ್ನು ತಕ್ಕಮಟ್ಟಿಗೆ ದೂರ ಮಾಡಿದೆ. ಅದರಂತೆ ರಾಜ್ಯದಲ್ಲಿ “ಬೇಸಗೆಯ ಪೀಕ್’ ಅಂದರೆ ಮೇಯಲ್ಲೂ ಮಳೆಯ ದಿನಗಳು ಹೆಚ್ಚು ಇರಲಿದ್ದು, ಇದರಿಂದ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತಾಪಮಾನ ಕಡಿಮೆ ಇರಲಿದೆ.
ಮೇಯಲ್ಲಿ 10ದಿನ ಮಳೆ!
ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಈ ಮಾಹಿತಿಯನ್ನು ತಿಳಿಸಿದೆ. ಇಡೀ ತಿಂಗಳಿನಲ್ಲಿ ಸರಾಸರಿ 6ರಿಂದ 7 ದಿನಗಳು ಮಳೆಯ ದಿನಗಳಾಗಿವೆ. ಈ ಬಾರಿ ಇದಕ್ಕಿಂತ ಹೆಚ್ಚಿನ ಮಳೆಯ ದಿನಗಳನ್ನು ನಿರೀಕ್ಷೆ ಮಾಡಲಾಗಿದೆ. 9ರಿಂದ 10 ದಿನಗಳು ಗುಡುಗು, ಮಿಂಚು ಸಹಿತ ಮಳೆ ಸುರಿಯಬಹುದು. ಪ್ರತೀ ವರ್ಷ ಮೇ ತಿಂಗಳಿನಲ್ಲಿ ಸರಾಸರಿ 11 ಸೆಂ.ಮೀ. ಮಳೆಯಾಗಲಿದ್ದು, ಈ ವರ್ಷ ಅದಕ್ಕಿಂತ ಹೆಚ್ಚಿನ ಮಳೆಯಾಗಬಹುದು ಎಂದು ಇಲಾಖೆ ವಿಜ್ಞಾನಿ ಎ. ಪ್ರಸಾದ್ ತಿಳಿಸಿದ್ದಾರೆ.