ಬೆಂಗಳೂರು: ಜನ ಕಲ್ಯಾಣಕ್ಕಾಗಿ ವಿವಿಧ ನಿಗಮಗಳಿಗೆ ನೀಡಲಾಗಿರುವ ಅನುದಾನ ನೇರವಾಗಿ ಫಲಾನುಭವಿಗಳಿಗೆ ಮುಟ್ಟಬೇಕೆನ್ನುವ ಗುರಿಯನ್ನು ಅಧಿಕಾರಿಗಳಿಗೆ ನೀಡಲಾಗಿದ್ದು, ಇದನ್ನು ನಾನೇ ಸ್ವತ: ಮೇಲ್ವಿಚಾರಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಲ್ಯಾಣ ಮಿತ್ರ ಸಹಾಯವಾಣಿ ಹಾಗೂ ಇಲಾಖೆಯ ಅಧಿಕಾರಿಗಳಿಗೆ ವೃತ್ತಿ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ಕೊಟ್ಟರು.
ಬದಲಾವಣೆಯ ಕಾಲ ಪ್ರಾರಂಭವಾಗಿದ್ದು, ಸಬೂಬುಗಳ ಕಾಲ ಮುಗಿದಿದೆ. ಶಿಕ್ಷಣ, ಆದಾಯ ಹೆಚ್ಚಳ, ಸ್ವಾಭಿಮಾನಿ ಬದುಕಿಗೆ ಬೇಕಾಗುವ ಎಲ್ಲ ವ್ಯವಸ್ಥೆಗಳನ್ನು ಸರ್ಕಾರ ಮಾಡುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಪಾದರಸದಂತೆ ಕೆಲಸ ಮಾಡಬೇಕು. ಕೇವಲ ಘೋಷಣೆಯಲ್ಲ, ಕ್ರಿಯೆಯಿಂದ ಈ ವರ್ಗದ ಅಭಿವೃದ್ಧಿ ಸಾಧ್ಯ ಇದು. ಫಲಾನುಭವಿಗಳಿಗೆ ಮೀಸಲಿಟ್ಟಿರುವ ಹಣ ಅವರಿಗೆ ಯಾವುದೇ ತೊಡಕುಗಳಿಲ್ಲದೇ ತಲುಪಬೇಕು ಎಂದು ತಿಳಿಸಿದರು.