ಬೆಂಗಳೂರು: ಸ್ಯಾಂಡಲ್‍ವುಡ್‍ನ ಡ್ರಗ್ಸ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಸಿಸಿಬಿ ವಿಚಾರಣೆಯ ವೇಳೆ ಹೊಸ ಹೊಸ ವಿಷಯಗಳು ಹೊರ ಬರುತ್ತಿವೆ. ಸದ್ಯ ಈ ಡ್ರಗ್ಸ್ ಕೇಸ್‍ನಲ್ಲಿ ಆರೋಪಿ ನಂಬರ್ 2 ಆಗಿರುವ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ನಟಿ ರಾಗಿಣಿ ಆಪ್ತ ರವಿಶಂಕರ್ ಅರೆಸ್ಟ್ ಆದ ಬಳಿಕ ಒಬ್ಬೊಬ್ಬರಾಗಿ ಅರೆಸ್ಟ್ ಆಗುತ್ತಿದ್ದಾರೆ. ರವಿಶಂಕರ್ ಬಾಯಿಬಿಡುತ್ತಿದ್ದಂತೆ ನಟಿ ರಾಗಿಣಿ ಸಹ ಸಿಸಿಬಿ ಬಂಧನದಲ್ಲಿದ್ದಾರೆ. ನಂತರ ಶಿವಪ್ರಕಾಶ್ ಪಾತ್ರ ಗೊತ್ತಾಗಿದ್ದು, ಅಲ್ಲದೇ ವಿಚಾರಣೆ ವೇಳೆ ರವಿಶಂಕರ್ ಡೀಲರ್ ಅನ್ನೋದು ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲದೇ ಶಿವಪ್ರಕಾಶ್ ಕೂಡ ಡ್ರಗ್ ಡೀಲ್ ಮಾಡುತ್ತಿದ್ದು, ಪಾರ್ಟಿಗಳಿಗೆ ಡ್ರಗ್ಸ್ ಕೊಡುತ್ತಿದ್ದನು. ರಾಗಿಣಿ ಸೇರಿ ಹಲವು ಮಾಡೆಲ್‍ಗಳಿಗೂ ಪಾರ್ಟಿಗಳಲ್ಲಿ ಡ್ರಗ್ಸ್ ಕೊಡುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈ ಡ್ರಗ್ಸ್ ಕೇಸ್‍ನಲ್ಲಿ ಶಿವಪ್ರಕಾಶ್ ಆರೋಪಿ ನಂಬರ್ 1 ಆಗಿದ್ದು, ನಟಿ ರಾಗಿಣಿ ಆರೋಪಿ ನಂಬರ್ 2 ಆಗಿದ್ದಾರೆ.
ಪ್ರಕರಣದಲ್ಲಿ ಎ1 ಶಿವಪ್ರಕಾಶ್, ರಾಗಿಣಿಯನ್ನ ಎ2 ಏಕೆ ಮಾಡಲಾಯಿತು:
ರವಿಶಂಕರ್ ಅರೆಸ್ಟ್ ಆದ ನಂತರವೇ ಶಿವಪ್ರಕಾಶ್ ರೋಲ್ ಗೊತ್ತಾಗಿದ್ದು, ವಿಚಾರಣೆ ವೇಳೆ ತಾನೂ ಡೀಲರ್ ಅನ್ನೋದನ್ನ ರವಿಶಂಕರ್ ಹೇಳಿದ್ದನು. ಸಾಕಷ್ಟು ಬಾರಿ ಶಿವಪ್ರಕಾಶ್ ಡೀಲ್ ಮಾಡಿ ರಾಗಿಣಿ ಸೇರಿದಂತೆ ಪಾರ್ಟಿಗಳಲ್ಲಿ ಡ್ರಗ್ಸ್ ಕೊಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿತ್ತು. ಅಲ್ಲದೇ ಶಿವಪ್ರಕಾಶ್ ಡ್ರಗ್ ಪೆಡ್ಲರ್‌ಗಳ ಜೊತೆ ವ್ಯವಹಾರ ಮಾಡಿರುವ ಸಾಕ್ಷಿ ಸಿಕ್ಕ ಹಿನ್ನೆಲೆ ಆತನನ್ನು ಆರೋಪಿ ನಂಬರ್ 1 ಮಾಡಲಾಗಿದೆ.
ಇತ್ತ ಪ್ರಕರಣದಲ್ಲಿ ರಾಗಿಣಿ ಎಲ್ಲೂ ನೇರವಾಗಿ ಭಾಗಿಯಾಗಿರಲಿಲ್ಲ. ಶಿವಪ್ರಕಾಶ್ ಅಥವಾ ರವಿಶಂಕರ್ ಕೊಟ್ಟ ಡ್ರಗ್ಸ್ ಪಡೆದು ಪಾರ್ಟಿಯಲ್ಲಿ ನಟಿ ರಾಗಿಣಿ ಹಂಚಿಕೆ ಮಾಡಿದ್ದರು. ಅಲ್ಲದೇ ಎಲ್ಲೂ ಕೂಡ ರಾಗಿಣಿ ಹಣಕ್ಕಾಗಿ ಡ್ರಗ್ಸ್ ಮಾರಿಲ್ಲ ಅನ್ನೋದು ಗೊತ್ತಾಗಿದೆ. ಹೀಗಾಗಿ ಶಿವಪ್ರಕಾಶ್ ಎ1, ರಾಗಿಣಿ ಎ2 ಆಗಿದ್ದಾರೆ.