ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಿಂದಾಗಿ ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಎಚ್ಚೆತ್ತುಕೊಂಡಿದ್ದು ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದ್ದಾರೆ.
ಬೆಳಗಾವಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಯಾರಾದರೂ ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡುತ್ತಿದ್ದರೆ ಬಂದ್ ಮಾಡಿಸಬೇಕು. ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡಲು ಬಿಡಬಾರದು. ಸರ್ಕಾರದ ಯೋಜನೆ ಮಂಜೂರಾಗದೇ ಯಾರಾದರೂ ಕಾಮಗಾರಿ ಮಾಡುವುದು ಗಮನಕ್ಕೆ ಬಂದರೆ ಪಿಡಿಒಗಳು, ಇಒಗಳು, ಇಂಜಿನಿಯರ್‌ಗಳೇ ಹೊಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ನಿಮ್ಮ ಮನೆಯಲ್ಲಿ ಯಾರಾದರೂ ಹೇಳದೇ ಕೆಲಸ ಮಾಡುವುದಕ್ಕೆ ಬಂದರೆ ಸುಮ್ಮನೇ ಇರುತ್ತೀರಾ? ಹೀಗಾಗಿ ಬಹಳ ಬಿಗಿಯಾಗಿ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅನಧಿಕೃತ ವ್ಯಕ್ತಿಗಳು ನಮ್ಮ ಪ್ರಿಮೈಸಿಸ್‍ನಲ್ಲಿ ಬರಬಾರದು. ಗ್ರಾಮ ಪಂಚಾಯತ್‍ನಲ್ಲಿ ಯಾರಾದರೂ ಬಂದು ಕೆಲಸ ಮಾಡುತ್ತಾರೆ ಅಂದರೆ ಬಿಡಬಾರದು. ಒಂದು ವೇಳೆ ಬಿಟ್ಟಿದ್ದೆ ಆದರೆ, ಸುಮ್ಮನೇ ಅಧಿಕಾರಿಗಳಿಗೂ ಕೆಟ್ಟ ಹೆಸರು, ಸರ್ಕಾರಕ್ಕೂ ಕೆಟ್ಟ ಹೆಸರು ವಿನಾ ಕಾರಣ ಅಪಪ್ರಚಾರ ಆಗುತ್ತದೆ. ಒಂದು ವೇಳೆ ಯಾರಾದರೂ ಪುಂಡಾಟಿಕೆ ಮಾಡಿದರೆ ಪೊಲೀಸರಿಗೆ ದೂರು ನೀಡಬೇಕು ಎಂದು ಸೂಚನೆ ನೀಡಿದ್ದಾರೆ.