ಬೆಂಗಳೂರು: ಹಿಂದಿ ವಿಚಾರವಾಗಿ ಕನ್ನಡ ನಟ ಸುದೀಪ್ ಹೇಳಿಕೆಗೆ ಟ್ವೀಟ್ ಮಾಡಿ ಅತಿರೇಕ ತೋರಿದ್ದ ಬಾಲಿವುಡ್ ನಟ ಅಜಯ್ ದೇವಗನ್ ವಿರುದ್ಧ ರಾಜಕಾರಣಿಗಳು, ಚಿತ್ರರಂಗ ಸೇರಿ ಕನ್ನಡಿಗರು ಸಿಡಿದೆದ್ದಿರುವ ಬೆನ್ನಲ್ಲೇ, ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕಡ್ಡಾಯ ಮಾಡಿಲ್ಲ, ಹಿಂದೆ ಹೇರಿಕೆಗೆ ಯಾರ ಮೇಲೂ ಒತ್ತಡ ಹಾಕಿಲ್ಲ ಎಂದು ಕೇಂದ್ರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಧಮೇಂದ್ರ ಪ್ರಧಾನ್ ಸ್ಪಷ್ಟನೆ ನೀಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಜಾರಿ ಸಂಬಂಧ ಗುರುವಾರ ವಿಧಾನಸೌಧದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಸುದೀಪ್- ಅಜಯ್ ದೇವಗನ್ ನಡುವಿನ ಟ್ವೀಟ್ ಸಮರವನ್ನು ಪ್ರಸ್ತಾಪಿಸಿ, ‘ಹಿಂದಿ ರಾಷ್ಟ್ರಭಾಷೆ ಎಂಬ ಅಜಯ್ ದೇವಗನ್ ಹೇಳಿಕೆ ಗಮನಿಸಿದ್ದೇನೆ ಎಂದರು.
ಮಾತೃಭಾಷೆ ವಿಷಯದಲ್ಲಿ ನಟ ಸುದೀಪ್ ಹೇಳಿರುವುದು ಸರಿಯಾಗಿದೆ. ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ರಾಜ್ಯಗಳ ರಚನೆಯಾದ ಮೇಲೆ ಆಯಾ ರಾಜ್ಯಗಳಿಗೆ ಮಾತೃಭಾಷೆ (ಪ್ರಾದೇಶಿಕ ಭಾಷೆ)ಯೇ ಸಾರ್ವಭೌಮ ಹಾಗೂ ಅದಕ್ಕೆ ಪ್ರಾಮುಖ್ಯತೆ ಇದೆ.