ಧಾರವಾಡ: ಧಾರವಾಡ- ಬೆಳಗಾವಿ ನೂತನ ರೈಲ್ವೆ ಮಾರ್ಗದ ಯೋಜನೆಗೆ ಸಂಬಂಧಸಿದಂತೆ 2021ರ ಅಕ್ಟೋಬರ್ 16ರಂದು ಹುಬ್ಬಳ್ಳಿಯಲ್ಲಿ ಸಂಸತ್ತಿನ ಸದಸ್ಯರು ತೆಗೆದುಕೊಂಡ ನಿರ್ಧಾರಕ್ಕೆ ಗುರುವಾರ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬೆಳಗಾವಿ ತಾಲೂಕಿನ ಕೆಕೆ ಕೊಪ್ಪ, ದೇಸೂರು ಗ್ರಾಮದ ವ್ಯಾಪ್ತಿಯಲ್ಲಿ ಧಾರವಾಡ-ಬೆಳಗಾವಿ ರೈಲು ಮಾರ್ಗ ಹಾದು ಹೋಗಲಿದೆ.
ಇದಕ್ಕೆ ಸಾಕಷ್ಟು ಕೃಷಿ ಭೂಮಿ ಬಳಕೆಯಾಗಲಿದೆ. ಹೀಗಾಗಿ ಕೆಲ ಜನಪ್ರತಿನಿಧಿಗಳು, ರೈತರ ಮುಖಂಡರು ಕೃಷಿ ಭೂಮಿ ಕೈ ಬಿಟ್ಟು ಪಕ್ಕದ ಸರಕಾರಿ ಭೂಮಿ ಬಳಕೆಗೆ ಸಲಹೆ ನೀಡಿದ್ದರು. ಇದರಿಂದ ರೈಲು ಮಾರ್ಗದ 5 ರಿಂದ 6 ಕಿ.ಮೀ. ಅಂತರ ಕಡಿಮೆಯಾಗಲಿದೆ ಎಂದು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ರೈಲ್ವೆ ಇಲಾಖೆ ಮರು ಸಮೀಕ್ಷೆ ಮಾಡಿತ್ತು.
ಬಳಿಕ ಹುಬ್ಬಳ್ಳಿಯ ನೈಋತ್ಯ ರೈಲ್ವೆ ಇಲಾಖೆ ಕೇಂದ್ರ ಕಚೇರಿಯಲ್ಲಿ 2021ರ ಅಕ್ಟೋಬರ್ 16ರಂದು ಜರುಗಿದ ಒಂಬತ್ತು ಜನ ಸಂಸತ್ತಿನ ಸದಸ್ಯರ ಸಭೆಯಲ್ಲಿ, ರೈತರು ಸೂಚಿಸಿದ ಮಾರ್ಗವನ್ನು ಬಿಟ್ಟು, ದೇಸೂರು ಮಾರ್ಗದಲ್ಲಿ ಕೃಷಿ ಭೂಮಿಯಲ್ಲಿಯೇ ಯೋಜನೆ ಪ್ರಾರಂಭಿಸಲು ಸಂಸತ್ತಿನ ಸದಸ್ಯರು, ರೈಲ್ವೆ ಇಲಾಖೆಯ ಎಂಜಿನಿಯರ್‌ಗಳಿಗೆ ಸೂಚಿಸಿದ್ದರು.