ಬೆಂಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಹಗರಣದ ಸಂಬಂಧ ಬುಧವಾರ 50 ಅಭ್ಯರ್ಥಿಗಳ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು, ಪ್ರವೇಶ ಪತ್ರದ ಅಸಲು ಪ್ರತಿ ಹಾಗೂ 2ನೇ ಪತ್ರಿಕೆಯ ಓಎಂಆರ್ ಶೀಟ್ ಕಾರ್ಬನ್ ಪ್ರತಿ ಸಂಗ್ರಹಿಸಿದ್ದಾರೆ.
ಅವ್ಯವಹಾರ ನಡೆದಿದ್ದಲ್ಲಿ ಕಾರ್ಬನ್ ಪ್ರತಿ ಪರಿಶೀಲನೆಯಿಂದ ದೃಢಪಡಲಿದೆ.
ಕಲಬುರಗಿಯಲ್ಲಿ ಠಿಕಾಣಿ ಹೂಡಿರುವ ಸಿಐಡಿಯ ಒಂದು ತಂಡ, ಅಕ್ರಮ ನೇಮಕಾತಿಯಲ್ಲಿ ಭಾಗಿಯಾದವರನ್ನು ಒಬ್ಬರಾದ ಮೇಲೆ ಒಬ್ಬರಂತೆ ಬಂಧಿಸುತ್ತಿದ್ದಾರೆ. ಮತ್ತೊಂದು ತಂಡ, ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ಮೊದಲ 50 ಅಭ್ಯರ್ಥಿಗಳನ್ನು ಬೆಂಗಳೂರಿನ ಸಿಐಡಿ ಕಚೇರಿಗೆ ಕರೆಸಿ ದಾಖಲೆ ಪಡೆದು ಹೇಳಿಕೆ ಪಡೆದಿದೆ. ಮತ್ತೆ 50 ಅಭ್ಯರ್ಥಿಗಳಿಗೆ ನೋಟಿಸ್ ಕೊಟ್ಟು ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಅರಮನೆ ರಸ್ತೆ ಕಾರ್ಲಟನ್ ಭವನದ ಸಿಐಡಿ ಎಫ್ಐಯು ವಿಭಾಗದ ಅಧಿಕಾರಿಗಳ ಮುಂದೆ 50 ಅಭ್ಯರ್ಥಿಗಳು ಹಾಜರಾಗಿದ್ದರು. ಪ್ರತಿಯೊಬ್ಬರ ಪ್ರವೇಶ ಪತ್ರದ ಅಸಲು ಪ್ರತಿ ಮತ್ತು 2ನೇ ಪತ್ರಿಕೆಯ ಓಎಂಆರ್ ಶೀಟ್ನ ಕಾರ್ಬನ್ ಅಸಲು ಪ್ರತಿಯನ್ನು ಪಡೆದು ಪ್ರಾಥಮಿಕ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಭ್ಯರ್ಥಿಗಳಿಂದ ಪಡೆದಿರುವ ಪ್ರವೇಶ ಪತ್ರ ಮತ್ತು ಓಎಂಆರ್ ಶೀಟ್ನ ಕಾರ್ಬನ್ ಪ್ರತಿಯನ್ನು ನೇಮಕಾತಿ ವಿಭಾಗದಲ್ಲಿರುವ ಅಸಲಿ ದಾಖಲೆಗಳ ಜತೆ ತಾಳೆ ಮಾಡಲಾಗುತ್ತದೆ. ಇದರಲ್ಲಿ ವ್ಯತ್ಯಾಸ ಕಂಡುಬಂದರೆ ಅಥವಾ ಅನುಮಾನ ಕಂಡರೆ ಅಂತಹ ಅಭ್ಯರ್ಥಿಗಳನ್ನು 2ನೇ ಸುತ್ತಿಗೆ ವಿಚಾರಣೆಗೆ ಕರೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಹಾಜರಾಗಿದ್ದ ಕೆಲ ಅಭ್ಯರ್ಥಿಗಳು ಓಎಂಆರ್ ಶೀಟ್ಗಳನ್ನು ಸಲ್ಲಿಸಲು ಸಬೂಬು ಹೇಳಿದ್ದಾರೆ. ಓಎಂಆರ್ ಶೀಟ್ನ ಕಾರ್ಬನ್ ಪ್ರತಿ ಕಡ್ಡಾಯವಾಗಿ ಸಲ್ಲಿಸಬೇಕು. ವಿಫಲವಾಗುವ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದರ ಜತೆಗೆ ಪರೀಕ್ಷೆ ಕೊಠಡಿ ಮೇಲ್ವಿಚಾರಕ, ಪರೀಕ್ಷೆ ಮುಗಿದ ಮೇಲೆ ಶಂಕಾಸ್ಪದ ಅಭ್ಯರ್ಥಿಗಳ ಹೆಸರು ಮತ್ತು ಕಡಿಮೆ ಪ್ರಶ್ನೆಗಳಿಗೆ ಉತ್ತರಿಸುವ ಅಭ್ಯರ್ಥಿಗಳ ನೋಂದಣಿ ಮತ್ತು ಹೆಸರನ್ನು ದಾಖಲೆ ಮಾಡಿರುತ್ತಾರೆ. ಆ ದಾಖಲೆಗೂ ತಾಳೆ ಮಾಡಿ ಪ್ರತಿಯೊಬ್ಬ ಅಭ್ಯರ್ಥಿಗಳ ಓಎಂಆರ್ ಶೀಟ್ಗಳನ್ನು ಪರಿಶೀಲಿಸಲಾಗುತ್ತದೆ. ಎಷ್ಟು ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ವಿಚಾರ ತನಿಖೆ ಪೂರ್ಣ ಮುಗಿದ ಮೇಲೆ ಗೊತ್ತಾಗಲಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.