ಬೆಂಗಳೂರು: ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಶೋಷಿತರಿಗೆ ಸಕಾಲಕ್ಕೆ ಪುನರ್ವಸತಿ ಮತ್ತು ಪರಿಹಾರ ಸಿಗುತ್ತಿಲ್ಲ ಎಂಬ ಕೊರಗು ನಿವಾರಿಸಲು ಸರ್ಕಾರ ಮುಂದಾಗಿದೆ. ಉದ್ಯಮ, ಸೇವೆ, ವ್ಯಾಪಾರ ಯೋಜನೆಯಡಿ ಸಾಲಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಬ್ಯಾಂಕ್ಗಳು ತಿರಸ್ಕರಿಸಿದರೂ ಪರಿಶಿಷ್ಟ ಜಾತಿ ಸಂತ್ರಸ್ತರು ಇನ್ನು ಹೆದರಬೇಕಿಲ್ಲ.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದಲೇ ಸಹಾಯಧನದ ಜತೆಗೆ ನೇರ ಸಾಲ ಸೌಲಭ್ಯವೂ ದೊರೆಯಲಿದೆ. ಜಿಲ್ಲಾಧಿಕಾರಿ ಹಂತದಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ. ದಲಿತ ಸಂಘಟನೆಗಳ ಧರಣಿಗೆ ಸರ್ಕಾರ ಸ್ಪಂದಿಸಿದ್ದು, ಸಮಾಜ ಕಲ್ಯಾಣ ಇಲಾಖೆ ಏ.12ರಂದು ಈ ಕುರಿತು ಆದೇಶ ಹೊರಡಿಸಿದೆ.
ಮುಖ್ಯಾಂಶಗಳು
- ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ತಲಾ 25 ಸಾವಿರ ರೂ. ನಿಗಮದ ಸಹಾಯಧನ ಹಾಗೂ ನೇರ ಸಾಲ ಬದಲಾಯಿಸಿ, ತಲಾ 50 ಸಾವಿರ ರೂ. ಸಹಾಯಧನ ಮತ್ತು ನೇರ ಸಾಲ
- ಉದ್ಯಮಶೀಲತಾ ಯೋಜನೆಯಡಿ ತಲಾ ಒಂದು ಲಕ್ಷ ರೂ. ಸಹಾಯಧನ ಹಾಗೂ ಬ್ಯಾಂಕ್ ಸಾಲ ಬದಲಾಗಿ ನಿಗಮದಿಂದ ತಲಾ ಒಂದು ಲಕ್ಷ ರೂ. ಸಹಾಯಧನ ಮತ್ತು ನೇರ ಸಾಲ.
- ಉದ್ಯಮಶೀಲತಾ ಯೋಜನೆಯಡಿ ಗರಿಷ್ಠ ತಲಾ ಐದು ಲಕ್ಷ ರೂ. ಸಹಾಯಧನ ಹಾಗೂ ಬ್ಯಾಂಕ್ ಸಾಲ ಯೋಜನೆ ಬದಲಾಯಿಸಿ ನಿಗಮದಿಂದಲೇ ತಲಾ 1.50 ಲಕ್ಷ ರೂ. ಸಹಾಯಧನ ಮತ್ತು ನೇರ ಸಾಲ
ಜಿಲ್ಲಾಧಿಕಾರಿ ಹೊಣೆ: ನಿಗದಿತ ಅನುದಾನವನ್ನು ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಮಾಡಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಲಾಗಿದೆ. ಅನುದಾನ ಬಿಡುಗಡೆ ಮಾಡುವ ಪೂರ್ವದಲ್ಲಿ ಫಲಾನುಭವಿಗಳ ಅರ್ಹತೆ ಖಾತರಿಪಡಿಸಿಕೊಳ್ಳುವ ಜವಾಬ್ದಾರಿ ಆಯಾ ಜಿಲ್ಲಾಧಿಕಾರಿಯದಾಗಿದೆ. ಇದಕ್ಕೆ 15 ದಿನಗಳ ಗಡುವು ವಿಧಿಸಲಾಗಿದೆ ಎಂದು ಆದೇಶ ತಿಳಿಸಿದೆ.