ಬೆಂಗಳೂರು, ಏ.20- ವಾಣಿ ವಿಲಾಸ ತಾಯಿ-ಶಿಶು ಆಸ್ಪತ್ರೆಯ ಮಾದರಿಯಲ್ಲೇ ಕೆ.ಸಿ. ಜನರಲ್ ಆಸ್ಪತ್ರೆಯಲ್ಲೂ ತಾಯಿ-ಶಿಶು ಆಸ್ಪತ್ರೆ ನಿರ್ಮಿಸ ಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ನಿರ್ಮಾಣ್ ಹಾಗೂ ಓಪನ್ ಟೆಕ್ಸ್ಟ್ ನೆರವಿನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಐಸಿಯು ಉನ್ನತೀಕರಣ ಹಾಗೂ ಹೊಸ ವೈದ್ಯಕೀಯ ಉಪಕರಣಗಳ ಅಳವಡಿಕೆ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡು ಮಾತನಾಡಿದರು.
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ತಾಯಿ-ಶಿಶು ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದೆ. ಇದನ್ನು ವಾಣಿ ವಿಲಾಸ ಮಾದರಿಯಲ್ಲಿ ನಿರ್ಮಿಸಲಾಗುವುದು. ಈಗಾಗಲೇ ಆಯವ್ಯಯದಲ್ಲಿ ಘೋಷಿಸಿದಂತೆ, ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಕನಿಷ್ಠ 500 ಹಾಸಿಗೆ ಸಾಮಥ್ರ್ಯ ಇರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಈ ವರ್ಷದಲ್ಲೇ ಎಲ್ಲಾ ಪ್ರಸ್ತಾವಗಳು ಬರಲಿದ್ದು, ಜಾಗಗಳನ್ನು ಗುರುತಿಸಲಾಗುವುದು. ಶೀಘ್ರದಲ್ಲೇ ಶಿಲಾನ್ಯಾಸ ನೆರವೇರಲಿದೆ ಎಂದರು.
ಖಾಸಗಿ ಸಂಸ್ಥೆಗಳು ಕೆ.ಸಿ.ಜನರಲ್‍ನಲ್ಲಿ 10 ಹಾಸಿಗೆಗಳ ಐಸಿಯು ವ್ಯವಸ್ಥೆಯನ್ನು ಮಾಡಿಕೊಟ್ಟಿವೆ. ಜೊತೆಗೆ ಅದಕ್ಕೆ ಬೇಕಿರುವ ಉಪರಣಗಳನ್ನೂ ನೀಡಲಾಗಿದೆ. ಐದು ವರ್ಷದೊಳಗಿನ ಮಕ್ಕಳು ನ್ಯುಮೋನಿಯಾದಿಂದ ಸಾವಿಗೀಡಾಗುವುದನ್ನು ತಪ್ಪಿಸಲು ರಾಜ್ಯಮಟ್ಟದ ಅರಿವು ಕಾರ್ಯಕ್ರಮ ಹಾಗೂ ಆಶಾ ಕಾರ್ಯಕರ್ತೆಯರು, ಇತರೆ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ನೀಡಲಾಗುತ್ತಿದೆ. ಇದು ಶ್ಲಾಘನೀಯವಾಗಿದೆ ಎಂದರು.