ನವದೆಹಲಿ: ಇತ್ತೀಚೆಗೆ ಹನುಮ ಜಯಂತಿ ವೇಳೆ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ದೆಹಲಿಯ ಜಹಾಂಗೀರ್‌ಪುರಿಗೂ ಸರ್ಕಾರ ಬುಲ್ಡೋಜರ್ ಶಾಕ್ ನೀಡಿದ್ದು, ದೆಹಲಿಯಲ್ಲಿ ನಿರ್ಮಾಣ ಮಾಡಲಾಗಿರುವ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಒಡೆದು ಹಾಕಲು ನಗರ ಪಾಲಿಕೆ ಆದೇಶ ನೀಡಿದೆ.
ಹನುಮ ಜಯಂತಿಯಂದು ದೆಹಲಿಯಲ್ಲಿ ನಡೆದ ಜಹಾಂಗೀರ್‌ಪುರಿ ಹಿಂಸಾಚಾರದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಉತ್ತರ ಮಹಾನಗರ ಪಾಲಿಕೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದೆ. ಈ ಮನವಿಯಲ್ಲಿ ಏ.20 ಮತ್ತು 21ರಂದು ಅಕ್ರಮ ಕಟ್ಟಗಳನ್ನು ತೆರವುಗೊಳಿಸಲಾಗುತ್ತದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 400 ಪೊಲೀಸರ ಭದ್ರತೆ ಒದಗಿಸಬೇಕು ಎಂದು ಕೇಳಿಕೊಂಡಿದೆ.
ಹಿಂಸಾಚಾರಕ್ಕೂ ಈ ಆದೇಶಕ್ಕೂ ನೇರ ಸಂಬಂಧ ಇಲ್ಲವಾದರೂ, ಇದು ದಾಳಿಕೋರರಿಗೆ ನೇರ ಸಂದೇಶ ನೀಡುವ ಉದ್ದೇಶ ಹೊಂದಿದೆ ಎನ್ನಲಾಗಿದೆ.
ಘಟನೆಯಲ್ಲಿ 8 ಪೊಲೀಸ್ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಸೇರಿದಂತೆ ಒಂಬತ್ತು ಮಂದಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಒಟ್ಟು 23 ಜನರನ್ನು ಬಂಧಿಸಲಾಗಿದೆ ಮತ್ತು ಇಬ್ಬರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ.