ಹಾವೇರಿ : ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಮಂಗಳವಾರ ರಾತ್ರಿ 10.30ರ ಸಮಯದಲ್ಲಿ ‘ಕೆಜಿಎಫ್-2’ ಸಿನಿಮಾ ನೋಡುವ ಸಂದರ್ಭ ಕ್ಷುಲ್ಲಕ ಕಾರಣಕ್ಕಾಗಿ ಪ್ರೇಕ್ಷಕರಿಬ್ಬರ ನಡುವೆ ಜಗಳ ನಡೆದು, ಪಿಸ್ತೂಲಿನಿಂದ ಗುಂಡು ಹೊಡೆದಿರುವ ಘಟನೆ ನಡೆದಿದೆ.
ಶಿಗ್ಗಾವಿ ತಾಲ್ಲೂಕಿನ ಮುಗಳಿ ಗ್ರಾಮದ ವಸಂತಕುಮಾರ ಸಣ್ಣಕಲ್ಲಪ್ಪ ಶಿವಪುರ (28) ಗುಂಡೇಟು ತಿಂದು ಗಾಯಗೊಂಡ ಪ್ರೇಕ್ಷಕ.
ಗಂಭೀರವಾಗಿ ಗಾಯಗೊಂಡಿರುವ ಇವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗುಂಡು ಹಾರಿಸಿದ ಆರೋಪಿ ಪರಾರಿಯಾಗಿದ್ದು, ಆತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಘಟನೆಗೆ ಕಾರಣವೇನು?
ಸಿನಿಮಾ ನೋಡುವ ಸಂದರ್ಭ ಮುಂದಿನ ಕುರ್ಚಿಯ ಮೇಲೆ ವಸಂತಕುಮಾರ ಕಾಲಿಟ್ಟಿದ್ದ. ಮುಂದಿನ ಕುರ್ಚಿಯಲ್ಲಿದ್ದ ಆರೋಪಿ ಕಾಲು ತೆಗೆಯುವಂತೆ ಹೇಳಿದ್ದಾನೆ. ಈ ಸಂದರ್ಭ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ, ಜಗಳ ನಡೆದಿದೆ. ನಂತರ ಆರೋಪಿ ಹೊರಗಡೆ ಹೋಗಿ ಹತ್ತು ನಿಮಿಷದ ನಂತರ ಮತ್ತೆ ಚಿತ್ರಮಂದಿರದ ಒಳಗೆ ಬಂದು, ವಸಂತಕುಮಾರನ ಮೇಲೆ ಪಿಸ್ತೂಲಿನಿಂದ ಮೂರು ಸುತ್ತು ಗುಂಡು ಹಾರಿಸಿದ್ದಾನೆ.
ಎರಡು ಗುಂಡುಗಳು ಕಾಲಿಗೆ ಬಿದ್ದಿದ್ದು, ಮತ್ತೊಂದು ‘ಮಿಸ್‌ಫೈರ್’ ಆಗಿದೆ. ಗುಂಡು ಹಾರಿಸಿದ ಘಟನೆಯಿಂದ ಚಿತ್ರಮಂದಿರದ ಪ್ರೇಕ್ಷಕರು ಗಾಬರಿಯಾಗಿ ಹೊರಗಡೆ ಓಡಿ ಹೋಗಿದ್ದಾರೆ.