Breaking News

ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್: ಕನ್ನಡ ಶಾಲೆ ಉಳಿವಿಗೆ ಆಂಗ್ಲ ಶಿಕ್ಷಣ ಅಗತ್ಯ

Spread the love

ಬೆಂಗಳೂರು: ಬಜೆಟ್​ನಲ್ಲಿ ಪ್ರಸ್ತಾಪಿಸಿರುವಂತೆ ಸರ್ಕಾರಿ ಮಾದರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಂಗ್ಲ ವಿಷಯ ಶಿಕ್ಷಕರಿಂದ ‘ಸ್ಪೋಕನ್ ಇಂಗ್ಲಿಷ್’ ತರಗತಿ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಆಯೋಜಿಸಿದ್ದ ‘ಕನ್ನಡ ಶಾಲೆ ಉಳಿಸಿ ಕನ್ನಡ ಬೆಳೆಸಿ’ ವಿಷಯ ಕುರಿತ ದುಂಡು ಮೇಜಿನ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕೆಂಬ ವ್ಯಾಮೋಹ ಪಾಲಕರಲ್ಲಿ ಹೆಚ್ಚುತ್ತಿರುವುದರಿಂದ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಕಡಿಮೆಯಾಗಿ ಮುಚ್ಚುವ ಹಂತ ತಲುಪುತ್ತಿವೆ ಎಂದರು.

ಪ್ರಸ್ತುತ ರಾಜ್ಯದ 47 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ 3800 ಶಾಲೆಗಳ ದಾಖಲಾತಿ ಸಂಖ್ಯೆ 10ಕ್ಕಿಂತ ಕಡಿಮೆ ಇದೆ. 562 ಶಾಲೆಗಳಲ್ಲಿ ಒಬ್ಬೊಬ್ಬರೇ ವಿದ್ಯಾರ್ಥಿಗಳಿದ್ದಾರೆ. ಇಂತಹ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಇಂಗ್ಲೀಷ್ ಕಲಿಕೆ, ಆಂಗ್ಲ ಮಾಧ್ಯಮದಲ್ಲಿ ಬೋಧನೆ ಆರಂಭಿಸಬೇಕಾಗಿದೆ. ಆಗ ಮಕ್ಕಳ ದಾಖಲಾತಿ ಹೆಚ್ಚುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದರು. ಗ್ರಾಮ ಪಂಚಾಯಿತಿಗೊಂದರಂತೆ ನಿರ್ವಿುಸುತ್ತಿರುವ ಸರ್ಕಾರಿ ಮಾದರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಬೋಧಿಸುವ ಜತೆಗೆ ಎಲ್ಲ ತರಗತಿ ಮಕ್ಕಳಿಗೂ ನುರಿತ ಆಂಗ್ಲ ಭಾಷಾ ಶಿಕ್ಷಕರಿಂದ ‘ಸ್ಪೋಕನ್ ಇಂಗ್ಲಿಷ್’ ತರಗತಿ ನಡೆಸಲಾಗುವುದು. ಈ ವರ್ಷ ಹೊಸದಾಗಿ 3000 ಮಾದರಿ ಶಾಲೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಆ ಶಾಲೆಗಳಲ್ಲೂ ಸ್ಪೋಕನ್ ಇಂಗ್ಲಿಷ್ ತರಗತಿ ನಡೆಸಲು ಅರ್ಹ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ನಾಗೇಶ್ ಹೇಳಿದರು. ದುಂಡು ಮೇಜಿನ ಸಭೆಯಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್.ಎಲ್.ಬೈರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ, ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿದ್ವಾಂಸರಾದ ಶತಾವಧಾನಿ ಗಣೇಶ್, ಚಂದ್ರಶೇಖರ ದಾಮ್ಲೆ, ಪಠ್ಯಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸೇರಿ ಹಲವು ಸಾಹಿತಿಗಳು, ಬರಹಗಾರರು ಭಾಗವಹಿಸಿ ತಮ್ಮ ಸಲಹೆ, ಅಭಿಪ್ರಾಯಗಳನ್ನು ಮಂಡಿಸಿದರು.


Spread the love

About Laxminews 24x7

Check Also

ಬಾಬಾನಗರದ ನೆಲದಲ್ಲಿ ಹೊಸ ಕೃಷಿ ಕ್ರಾಂತಿ; ರೆಡ್ ಡೈಮಂಡ್ ಪೇರಲ ಬೆಳೆದು ಸಚಿವರಿಗೆ ಉಡುಗೊರೆ ನೀಡಿದ ರೈತ*

Spread the love : ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಬರುವ ತಿಕೋಟಾ ತಾಲ್ಲೂಕಿನ ಬಾಬಾನಗರದ ನೆಲದಲ್ಲಿ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ