ಧಾರವಾಡ: ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಎಂಆರ್‌ಐ ಯಂತ್ರ ಅಳವಡಿಸಿ ಕಾರ್ಯಾರಂಭ ಮಾಡುವ ತನಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ವೈದ್ಯಕೀಯ ಶಿಕ್ಷಣ) ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ವೇತನವನ್ನು ತಡೆಹಿಡಿಯುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಎಸ್‌ಆರ್ ಕೃಷ್ಣ ಕುಮಾರ್ ಅವರ ವಿಭಾಗೀಯ ಪೀಠವು ಎರಡು ವರ್ಷಗಳ ಹಿಂದೆ ಯಂತ್ರವನ್ನು ಖರೀದಿಸಲು ಆರು ವಾರಗಳ ಕಾಲಾವಕಾಶವನ್ನು ನೀಡಿದ್ದರೂ ಇದುವೆರಗೂ ಕಾರ್ಯನಿರ್ವಹಿಸಲಿಲ್ಲ ಎಂದು ಗಮನಿಸಿ ಈ ನಿರ್ಣಯ ನೀಡಿದೆ.
ಯಂತ್ರ ಅಳವಡಿಸುವ ವಿಚಾರದಲ್ಲಿ ಹಲವು ಬಾರಿ ವಿಳಂಬ ಮಾಡಿದ ಕಾರಣ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಸೂಕ್ಷ್ಮ ಮನೋಭಾವ ಕಳೆದುಕೊಂಡಿದ್ದಾರೆ ಮತ್ತು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಟೀಕಿಸಿರುವ ನ್ಯಾಯಾಲಯ ಎಂಆರ್ ಐ ಯಂತ್ರ ಅಳವಡಿಸಿ ಕಾರ್ಯಾರಂಭ ಮಾಡುವವರೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ವೇತನವನ್ನು ನೀಡುವುದಿಲ್ಲ ಎಂದು ಸೂಚಿಸಿದೆ.