ಬೆಂಗಳೂರು: ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಲು ಮತ್ತು ಅನುಮತಿ ಪಡೆಯಲು ದೆಹಲಿಗೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ, ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಮಾಡುವ ಬಗ್ಗೆ ಇಂದು ವರಿಷ್ಠರ ಬಳಿ ಚರ್ಚಿಸುವ ಸಾಧ್ಯತೆ ಇದೆ. ಕರ್ನಾಟಕದ ಬಿಜೆಪಿ ಮಹಾನಾಯಕ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಬಸವರಾಜ ಬೊಮ್ಮಾಯಿ 8 ತಿಂಗಳ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ನಿರ್ಧರಿಸಿದ್ದಾರೆ.
ಇಂದು ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಉನ್ನತ ನಾಯಕರನ್ನು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಸಮಾಲೋಚಿಸುವ ಸಾಧ್ಯತೆಗಳಿವೆ. ನಿನ್ನೆಯೇ ದೆಹಲಿ ತಲುಪಿರುವ ಸಿಎಂ ಬೊಮ್ಮಾಯಿ, ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಮೇಕೆದಾಟು ಮತ್ತು ಕಳಸಾ ಬಂಡೂರಿ ಯೋಜನೆಗೆಳಿಗೆ ಹಸಿರು ನಿಶಾನೆ ತೋರುವಂತೆ ಮನವಿ ಮಾಡಿದ್ದಾರೆ. ಇಂದು ಕೂಡಾ ಅವರು ಹಲವು ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ.