ಬೆಂಗಳೂರು: ಜೆಡಿಎಸ್ ಪಕ್ಷಕ್ಕೆ ( JDS Party ) 5 ವರ್ಷಗಳ ಪೂರ್ಣ ಪ್ರಮಾಣ ಸರಕಾರ ಕೊಡಿ. ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುತ್ತೇನೆ. ಈ ಮಾತಿಗೆ ತಪ್ಪಿದರೆ ನಮ್ಮ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Ex CM HD Kumaraswamy ) ಘೋಷಣೆ ಮಾಡಿದ್ದಾರೆ.
ರೈತರ ಸಮಸ್ಯೆ, ಪರಿಹಾರಗಳ ಕುರಿತು ಬೆಂಗಳೂರಿನಲ್ಲಿ ಇಂದು ಹಸಿರು ಸೇನೆ ಏರ್ಪಡಿಸಿದ್ದ ‘ ಉಳುವ ಯೋಗಿಯ ನೋಡಲ್ಲಿ ‘ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಅವರು, ಈ ಒಂದು ಬಾರಿ ನಮ್ಮ ಪಕ್ಷಕ್ಕೆ ಅವಕಾಶ ಕೊಡಿ. ಯಾವುದೇ ಅನ್ಯ ಪಕ್ಷದ ಹಂಗಿಲ್ಲದೆ ಐದು ವರ್ಷಗಳ ಸಂಪೂರ್ಣ ಅವಧಿಗೆ ನಮ್ಮನ್ನು ಆಯ್ಕೆ ಮಾಡಿ. ಇಡೀ ರಾಜ್ಯದಲ್ಲಿ ಬಾಕಿ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುತ್ತೇನೆ. ಅದಕ್ಕೆ ನಮ್ಮ ಪಕ್ಷ ಬದ್ಧವಾಗಿದೆ ಎಂದರು.
ರೈತ ಮುಖಂಡರಿಗೆ 10 ಕಡೆ ಟಿಕೆಟ್
ರೈತ ಸಂಘಟನೆಗಳು ನೇರ ರಾಜಕಾರಣಕ್ಕೆ ಬರಬೇಕು ಎಂದು ಮುಕ್ತ ಕರೆ ನೀಡಿದ ಕುಮಾರಸ್ವಾಮಿ ಅವರು; ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಸಕ್ತಿ ಇರುವ ರೈತ ಮುಖಂಡರಿಗೆ ನಮ್ಮ ಪಕ್ಷದಿಂದ ಹತ್ತು ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ನೀಡಲಿದೆ ಎಂದು ಘೋಷಣೆ ಮಾಡಿದರು.
ನೀವು ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೂರಬೇಕಾದವರಲ್ಲ. ವಿಧಾನಸಭೆಯ ಮೂರನೇ ಮಹಡಿಯಲ್ಲಿ ಕೂರಬೇಕಾದವರು. ನಿಮ್ಮಲ್ಲಿ ಅನೇಕರಿಗೆ ಶಕ್ತಿ ಇದೆ. ನಿಮ್ಮ ಜತೆ ನಾನು ಇದ್ದೇನೆ. ನಿಮಗೆ ಎಲ್ಲ ರೀತಿಯ ಶಕ್ತಿ ತುಂಬುವೆ ಎಂದು ಮಾಜಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.