ಅರಸೀಕೆರೆ: ದೂರದ ಊರುಗಳಿಂದ ಬಂದಿದ್ದವರನ್ನು ಅಣ್ಣೇನಹಳ್ಳಿಯಲ್ಲಿ ಅಕ್ರಮವಾಗಿ ಕೂಡಿಟ್ಟು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದ ಅಮಾನವೀಯ ಪ್ರಕರಣವನ್ನು ಪತ್ತೆ ಹಚ್ಚಿರುವ ಪೊಲೀಸರು 55 ಕಾರ್ಮಿಕರನ್ನು ರಕ್ಷಿಸಿದ್ದಾರೆ. ಅವರನ್ನು ಕರೆತಂದ ಮಧ್ಯವರ್ತಿ ಮುನೇಶ್ ಪತ್ತೆಗೆ ತಂಡ ರಚಿಸಲಾಗಿದೆ.
ಚಿಕ್ಕಮಗಳೂರು, ದಾವಣೆಗೆರೆ, ಹುಬ್ಬಳ್ಳಿ, ಮಧುಗಿರಿ, ಪಾವಗಡ, ಮಂಡ್ಯ, ತಮಿಳುನಾಡು ಸೇರಿದಂತೆ ವಿವಿಧೆಡೆಗಳಿಂದ ಬಂದಿದ್ದ ಕಾರ್ಮಿಕರನ್ನು ಎರಡು ಪ್ರತ್ಯೇಕ ಶೆಡ್‌ಗಳಲ್ಲಿ ಕೂಡಿಟ್ಟಿದ್ದ ಆರೋಪಿ ಶುಂಠಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ. ಕೆಲಸ ಮುಗಿಸಿ ಬಂದ ನಂತರ ಎಲ್ಲರನ್ನೂ ಶೆಡ್‌ನಲ್ಲಿ ಕೂಡಿ ಹಾಕುತ್ತಿದ್ದ. ಅವರಿಗೆ ಹೊರ ಹೋಗಲು ಬಿಡುತ್ತಿರಲಿಲ್ಲ.
ಖಚಿತ ಮಾಹಿತಿ ಮೇರೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ, ಡಿವೈಎಸ್‌ಪಿ ಅಶೋಕ್, ಗ್ರಾಮಾಂತರ ಸಿಪಿಐ ಕೆ.ಎಂ.ವಸಂತ, ಪಿಎಸ್‌ಐ ಲಕ್ಷ್ಮಣ್ ನೇತೃತ್ವದಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿ, 45 ಪುರುಷರು, ಹತ್ತು ಮಹಿಳೆಯರನ್ನು ರಕ್ಷಿಸಿದರು.
ಬಿ.ಎನ್.ನಂದಿನಿ ಮಾತನಾಡಿ, ‘ಕಾರ್ಮಿಕರನ್ನು ಶುಂಠಿ ಕೆಲಸಕ್ಕೆಂದು ಕರೆ ತಂದು ಬೇರೆ ಬೇರೆ ಕೆಲಸಕ್ಕೆ ದುಡಿಸಿಕೊಳ್ಳಲಾಗಿದೆ. ಕೆಲವರು ಎರಡು ವರ್ಷ, ಕೆಲವರು ಆರು ತಿಂಗಳು, ಇನ್ನೂ ಕೆಲವರು ವಾರಗಳಿಂದ ಬಂಧಿಯಾಗಿದ್ದರು. ಹಲವರು ಎಷ್ಟೋ ದಿನಗಳಿಂದ ಸ್ನಾನವನ್ನೂ ಮಾಡದೆ, ಕೊಳಕು ಬಟ್ಟೆಯಲ್ಲೇ ಉಸಿರುಗಟ್ಟುವ ವಾತಾವರಣದಲ್ಲಿ ದಿನದೂಡುತ್ತಿದ್ದರು’ ಎಂದು ಮಾಹಿತಿ ನೀಡಿದರು.
‘ಕಾರ್ಮಿಕರಿಗೆ ಸರಿಯಾದ ಕೂಲಿ ಮತ್ತು ಮೂಲಸೌಲಭ್ಯ ಕಲ್ಪಿಸಿಲ್ಲ. ಅವರನ್ನು ಅಕ್ರಮವಾಗಿ ದುಡಿಸಿಕೊಳ್ಳಲು ಮುನೇಶ್ ಜೊತೆಗೆ ಕುಮಾರ, ಲಕ್ಷ್ಮೀ, ಮನು ಎಂಬುವವರೂ ಕೈ ಜೋಡಿಸಿದ್ದಾರೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದರು.