ನವದೆಹಲಿ: ದಿನೇಶ್ ಕಾರ್ತಿಕ್ ಮತ್ತು ಶಹಬಾಜ್ ಅಹ್ಮದ್ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ಟೂರ್ನಿಯ 13ನೇ ಪಂದ್ಯದಲ್ಲಿ ಆರ್‌ಸಿಬಿ 4 ವಿಕೆಟ್ ಗಳಿಂದ ಜಯ ಸಾಧಿಸಿತು.
ಟಾಸ್ ಗೆದ್ದ ಆರ್‌ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ್ ನಿಗದಿಗ 20 ಓವರ್‍ಗಳಲ್ಲಿ ಕೇವಲ 3 ವಿಕೆಟ್‍ಗಳನ್ನು ಕಳೆದುಕೊಂಡು 169 ರನ್‍ಗಳ ಸವಾಲಿನ ಮೊತ್ತವನ್ನು ಪೇರಿಸಿತು. 170 ರನ್‍ಗಳ ಗೆಲುವಿನ ಗುರಿ ಬೆನ್ನತ್ತಿದ ಆರ್‌ಸಿಬಿ ಟೂರ್ನಿಯಲ್ಲಿ 2ನೇ ಗೆಲುವು ಸಾಧಿಸಿ ಸಂಭ್ರಮಿಸಿತು.
ಡಿಕೆ & ಶಹಬಾಜ್ ಸ್ಫೋಟಕ ಬ್ಯಾಟಿಂಗ್!
170 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ ಆರ್ ಸಿಬಿ ಪರ ನಾಯಕ ಫಾಫ್ ಡು ಪ್ಲೆಸಿಸ್(29), ಅಂಜು ರಾವತ್(26) ಮೊದಲ ವಿಕೆಟ್‍ಗೆ 55 ರನ್‍ಗಳ ಜೊತೆಯಾಟವಾಡಿದರು. ಬಳಿಕ ಬಂದ ಕೊಹ್ಲಿ(5), ಡೇವಿಡ್ ವಿಲ್ಲಿ(0) ಮತ್ತು ಶೆರ್ಫೇನ್ ರುದರ್ಫೋರ್ಡ್(5) ಬಹುಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ದಿನೇಶ್ ಕಾರ್ತಿಕ್ ಮತ್ತು ಶಹಬಾಜ್ ಅಹ್ಮದ್ ಸೇರಿ ರಾಜಸ್ಥಾನ್ ಬೌಲರ್‍ಗಳ ಬೆವರಿಳಿಸಿದರು.
ಶಹಬಾಜ್ 26 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಇದ್ದ 44 ರನ್ ಗಳಿಸಿ ತಂಡದ ಗೆಲುವಿಗೆ ಅಮೂಲ್ಯ ಕಾಣಿಕೆ ನೀಡಿದರು. ದಿನೇಶ್ ಕಾರ್ತಿಕ್ 23 ಎಸೆಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಇದ್ದ 44 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಕೊನೆಯಲ್ಲಿ ಬಂದ ಹರ್ಷಲ್ ಪಟೇಲ್(ಅಜೇಯ 9) ರನ್ ಗಳಿಸಿದರು. ರಾಜಸ್ಥಾನ್ ಪರ ಬೌಲಿಂಗ್ ನಲ್ಲಿ ಟ್ರೆಂಟ್ ಬೌಲ್ಟ್ ಮತ್ತು ಯಜುವೇಂದ್ರ ಚಹಾಲ್ ತಲಾ 2 ವಿಕೆಟ್ ಪಡೆದರೆ, ನವದೀಪ್ ಸೈನಿ 1 ವಿಕೆಟ್ ಕಬಳಿಸಿದರು.