ವಿಜಯಪುರ: ಇಲ್ಲಿನ ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವ ಕೋಮು ಸೌಹಾರ್ದತೆಗೆ ವೇದಿಕೆಯಾಗಿದೆ. ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ವಿಜಯಪುರ ತಾಲೂಕಿನ ಕತಕನಹಳ್ಳಿಯಲ್ಲಿ ನಡೆದ ಜಾತ್ರೆಯಲ್ಲಿ ಮುಸ್ಲಿಂ ವರ್ತಕರು ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಜಾತಿ, ಧರ್ಮ ಬದಿಗಿಟ್ಟು ಗ್ರಾಮಸ್ಥರು ಒಂದಾಗಿ ಜಾತ್ರೆ ಮಾಡುತ್ತಿದ್ದಾರೆ. ರಾಜ್ಯದ ವಿವಿಧೆಡೆ ಹಿಂದೂ ದೇವಸ್ಥಾನಗಳಲ್ಲಿ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರದ ನಡುವೆ ಸಾಮರಸ್ಯದ ಘಟನೆ ನಡೆದಿದೆ. ದೇವಸ್ಥಾನಗಳಲ್ಲಿ, ಜಾತ್ರೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧದ ಮಾತು ಕೇಳಿಬರುತ್ತಿರುವ ನಡುವೆ ಇದಕ್ಕೆ ಹೊರತಾಗಿ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ವಿಜಯಪುರ ಜಿಲ್ಲೆ. ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರೆ ಕೋಮು ಸೌಹಾರ್ದತೆಗೆ ವೇದಿಕೆಯಾಗಿದೆ.
ವಿಜಯಪುರ ತಾಲೂಕಿನ ಕತಕನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರೋ ಜಾತ್ರೆ, ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರೆಯಲ್ಲಿ ಎಲ್ಲರೂ ಸಮಾನರು. ಯಾವುದೇ ಧರ್ಮ ಸಮುದಾಯದ ಬೇಧ ಭಾವವಿಲ್ಲ. ಸರ್ವ ಧರ್ಮೀಯರು ಕೂಡಿಕೊಂಡು ಭಾಗಿಯಾಗುವ ಜಾತ್ರೆ ಇದಾಗಿದೆ. ಭಾವೈಕ್ಯತೆಗೆ ಹಿಂದೂ- ಮುಸ್ಲಿಂ ಏಕತೆ ಸಾರುವ ಜಾತ್ರೆಯಲ್ಲಿ ಸರ್ವ ಧರ್ಮೀಯರಿಗೂ ವ್ಯಾಪಾರ ವಹಿವಾಟಿಗೆ ಅವಕಾಶ ಇದೆ. ಮುಸ್ಲೀಂ ವ್ಯಾಪಾರಸ್ಥರಿಗೂ ಅನುಮತಿ ಇದೆ. ನಮ್ಮಲ್ಲಿ ಬೇಧಭಾವ ಇಲ್ಲ, ಎಲ್ಲರೂ ಕೂಡಿ ಜಾತ್ರೆ ಮಾಡುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ನಮಗೆಲ್ಲರಿಗೂ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದ್ದಾರೆ ಎಂದು ಮುಸ್ಲಿಂ ವ್ಯಾಪಾರಿಗಳು ಹೇಳಿದ್ದಾರೆ. ಸರ್ವ ಧರ್ಮೀಯರು ಒಟ್ಟಾಗಿ ಆಚರಿಸೋ ಜಾತ್ರೆ ಇತರರಿಗೆ ಮಾದರಿ ಆಗಿದೆ.