ರಾಜ್ಯದಲ್ಲಿ ಲಿಥಿಯಂ-ಐಯಾನ್ ಸೆಲ್ ಉತ್ಪಾದನೆಗಾಗಿ ₹6,000 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲು ಎಕ್ಸೈಡ್ ಇಂಡಸ್ಟ್ರೀಸ್ ಮುಂದೆ ಬಂದಿದೆ. ಈ ನಿಟ್ಟಿನಲ್ಲಿ ಗುರುವಾರ ಎಕ್ಸೈಡ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿದೇರ್ಶಕ ಮತ್ತು ಸಿಇಒ ಸುಬೀರ್ ಚಕ್ರವರ್ತಿ ಅವರು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್ ನಿರಾಣಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಇದು ದೇಶದಲ್ಲೇ ಅತಿದೊಡ್ಡ ಲಿಥಿಯಂ ಆಧರಿತ ಬ್ಯಾಟರಿ ಕೋಶಗಳನ್ನು ಉತ್ಪಾದಿಸುವ ಗಿಗಾ ಫ್ಯಾಕ್ಟರಿ ಆಗಲಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದರಿಂದ ರಾಜ್ಯದಲ್ಲಿ 1,200-1,400 ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ.
ಎಕ್ಸೈಡ್ ಇಂಡಸ್ಟ್ರೀಸ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹರಳೂರು ಕೈಗಾರಿಕಾ ಪ್ರದೇಶದಲ್ಲಿ 80 ಎಕರೆ ಭೂಮಿಯನ್ನು ಕೋರಿದೆ.
ಕಂಪನಿಗೆ ಸರ್ಕಾರದ ಕಡೆಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ನಿರಾಣಿ ಭರವಸೆ ಇತ್ತಿದ್ದಾರೆ.