ಬೆಂಗಳೂರು: ‘ಹೊಟ್ಟೆನೋವು ಎಂದು ಆಸ್ಪತ್ರೆಗಳಿಗೆ ಬರುವ ಹೆಣ್ಣುಮಕ್ಕಳಿಗೆ ಗರ್ಭಕೋಶ ಸಮಸ್ಯೆ ಇದೆ ಎಂದು ಹೆದರಿಸಿ, ಗರ್ಭಕೋಶ ತೆಗೆಸುವ ದಂಧೆ ವೈದ್ಯರಿಂದಲೇ ನಡೆಯುತ್ತಿದೆ’ ಎಂದು ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಕೆ.ಜಿ.ನಾಗಲಕ್ಷ್ಮಿಬಾಯಿ ಮಂಗಳವಾರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಅವರು, ‘ಹಣದ ಆಸೆಗಾಗಿ ವೈದ್ಯರೇ ಈ ಕೃತ್ಯ ಎಸಗಿದ್ದಾರೆ. ಕಲಬುರಗಿ, ಹಾವೇರಿ, ಬೀದರ್, ಚಿಕ್ಕಮಗಳೂರು, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳು ಸೇರಿದಂತೆ ರಾಜ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿಗೆ ಗರ್ಭಕೋಶ ತೆಗೆಯಲಾಗಿದೆ’ ಎಂದು ದೂರಿದರು.
‘ಹೊಟ್ಟೆನೋವು ಮತ್ತು ಇತರ ಸಮಸ್ಯೆಗಳಿಂದ ಆಸ್ಪತ್ರೆಗಳಿಗೆ ಬರುವ ವಿವಾಹಿತ ಮಹಿಳೆಯರು ಮತ್ತು ಅವಿವಾಹಿತ ಹೆಣ್ಣುಮಕ್ಕಳಿಗೆ, ‘ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದೆ, ತೆಗೆಯದಿದ್ದರೆ ಜೀವಕ್ಕೆ ಕುತ್ತು’ ಎಂದು ಭಯ ಸೃಷ್ಟಿಸಿ, ಸುಮಾರು ₹ 50 ಸಾವಿರದವರೆಗೆ ಹಣ ಪಡೆದು, ಗರ್ಭಕೋಶಗಳನ್ನು ತೆಗೆದಿದ್ದಾರೆ’ ಎಂದು ವಿವರಿಸಿದರು.
‘ಈ ಕೃತ್ಯಕ್ಕೆ ಸಿಲುಕಿದ ಅನೇಕ ಮುಗ್ಧ ಮಹಿಳೆಯರು ಶಸ್ತ್ರಚಿಕಿತ್ಸೆ ನಂತರ ಮೃತಪಟ್ಟಿದ್ದಾರೆ. ಕೆಲವರು ನರದೌರ್ಬಲ್ಯ, ಕೂದಲು ಉದುರುವಿಕೆ, ಖಿನ್ನತೆಯಂತಹ ಸಮಸ್ಯೆಗಳಿಂದ ಈಗಲೂ ಬಳಲುತ್ತಿದ್ದಾರೆ. ಇವರಿಗೆ ಸರ್ಕಾರ ಸಹಾಯಧನ ಘೋಷಿಸಿ, ಬದುಕಿಗೆ ಆಸರೆಯಾಗಬೇಕು’ ಎಂದು ಒತ್ತಾಯಿಸಿದರು.