ತೀರ್ಥಹಳ್ಳಿ: ‘ತಾಲ್ಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಕಸ ಸಂಗ್ರಹಣೆ ವಾಹನ ಆರಂಭದಲ್ಲೇ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
ಗ್ರಾಮಸ್ಥರು, ಜನಪ್ರತಿನಿಧಿಗಳು ಗೋಗರೆದರೂ ಕಸ ವಿಲೇವಾರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಪಂದಿಸುತ್ತಿಲ್ಲ’ ಎಂಬ ದೂರು ಸಾರ್ವಜನಿಕರಿಂದ ಕೇಳಿ
ಬಂದಿದೆ.
ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಗ್ರಾಮದ ವ್ಯಾಪ್ತಿಯಲ್ಲಿ ಅನೇಕ ವಾಣಿಜ್ಯ ಮಳಿಗೆ, ದಿನಂಪ್ರತಿ ಸಭೆ-ಸಮಾರಂಭಗಳು ನಡೆಯುವುದರಿಂದ ಹೆಚ್ಚು ಕಸ ಸಂಗ್ರಹವಾಗುತ್ತಿದೆ.
ಮೊದಲಿನಿಂದ ಕಸ ವಿಲೇವಾರಿ ಸಮಸ್ಯೆ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೆ. ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಿಂದ ಕಸ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲಾಗುತ್ತಿತ್ತು. ಆದರೀಗ ಸ್ವಚ್ಛ ಭಾರತ್ ಮಿಷನ್ ವಾಹನ ಇದೆ. ಆದರೆ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ನಿಗದಿಪಡಿಸಿದ ವಾರದ ಎರಡು ದಿನವೂ ವಾಹನ ಗ್ರಾಮದಲ್ಲಿ ಕಾಣಿಸುತ್ತಿಲ್ಲ.
ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಮೇಲಿನ ಕುರುವಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು, ನೌಕರರು ಸೇರಿದಂತೆ ಶ್ರಮಿಕ ವರ್ಗದವರು ವಾಸವಾಗಿದ್ದಾರೆ. ನಿತ್ಯ ಹಲವು ಕಾರ್ಯಕ್ರಮ ಆಯೋಜನೆಗೊಳ್ಳುತ್ತಿರುವ ಕಾರಣ ಕಸವೂ ಹೆಚ್ಚು ಸಂಗ್ರಹವಾಗುತ್ತಿದೆ. ವಿಲೇವಾರಿ ಸಮಸ್ಯೆ ಉಲ್ಬಣವಾಗುತ್ತಿದೆ. ಗ್ರಾಮದಲ್ಲಿ ಇನ್ನೂ ಅನೇಕರು ಕಸದ ವಾಹನವನ್ನೇ ಇನ್ನೂ ನೋಡಿಲ್ಲ.
‘ಸ್ವಚ್ಛ ಭಾರತ್ ಮಿಷನ್ ಯೋಜನೆಯ ಬಕೆಟ್‌ಗಳು ಬಹಳಷ್ಟು ಗ್ರಾಮಸ್ಥರಿಗೆ ಲಭಿಸಿಲ್ಲ. ವಾಹನದ ಉದ್ದೇಶಗಳು ಕಾಣಿಸುವ ಫಲಕ, ಬರಹಗಳನ್ನೂ ಹಾಕದೇ ನಿರ್ಲಕ್ಷ್ಯ ತೋರಲಾಗಿದೆ. ಹೆಗ್ಗೆಬೈಲು, ತುಮಡಿ, ಬಿಳಿಗೆರೆ, ಹುಣಸವಳ್ಳಿ, ಮೇಲಿನ ಕುರುವಳ್ಳಿ, ತಿರಳೇಬೈಲು, ಬುಕ್ಲಾಪುರ, ಕೆಸರೆ, ಸುಳುಗೋಡು, ಹೊರಬೈಲು ಭಾಗದಲ್ಲಿ ಕಸ ಎಸೆಯಲಾಗುತ್ತಿದೆ. ಆಸ್ಪತ್ರೆ ತ್ಯಾಜ್ಯ, ಇ-ವೇಸ್ಟ್, ಸಮಾರಂಭಗಳ ತ್ಯಾಜ್ಯ ಎಲ್ಲೆಂದರಲ್ಲಿ ಹಾಕಲಾಗಿದೆ’ ಎಂದು ಬಿಜೆಪಿ ಮುಖಂಡ ಸುಧಾಕರ್ ಮುನ್ನೂರು ದೂರಿದ್ದಾರೆ.