ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಆದ್ಯತಾ ಪಡಿತರ ಚೀಟಿ (ಬಿಪಿಎಲ್ ಕಾರ್ಡ್) ಬಯಸಿ ಅರ್ಜಿ ಸಲ್ಲಿಸಿದವರ ಪೈಕಿ ಮನೆ ಮನೆ ಸಮೀಕ್ಷೆ ಪೂರ್ಣಗೊಂಡ 4.25 ಲಕ್ಷ ಅರ್ಜಿದಾರರ ಜೈವಿಕ ದತ್ತಾಂಶ ಸಂಗ್ರಹಿಸಿ, ಒಂದು ತಿಂಗಳೊಳಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಭರವಸೆ ನೀಡಿದರು.
ವಿಧಾನಪರಿಷತ್ನಲ್ಲಿ ಸೋಮವಾರ ಕಾಂಗ್ರೆಸ್ನ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿ, ಕಳೆದ ಮೂರು ವರ್ಷ (2022ರ ಫೆಬ್ರವರಿ ಅಂತ್ಯ)ಗಳಲ್ಲಿ ಆದ್ಯತಾ ಪಡಿತರ ಚೀಟಿ ಕೋರಿ ಒಟ್ಟು 15,53,745 ಅರ್ಜಿಗಳು ಸ್ವೀಕೃತವಾಗಿವೆ.
ಇದರಲ್ಲಿ 8,03,782 ಅರ್ಹ ಅರ್ಜಿದಾರರಿಗೆ ಬಿಪಿಎಲ್ ಪಡಿತರ ಕಾರ್ಡ್ ವಿತರಿಸಲಾಗಿದೆ. ಕರೊನಾ ಹಾವಳಿ ಕಾರಣಕ್ಕೆ ಮನೆ ಮನೆ ಸಮೀಕ್ಷೆ, ಜೈವಿಕ ತಂತ್ರಾಂಶ ಸಂಗ್ರಹ ಸ್ಥಗಿತವಾಗಿತ್ತು. ಇದರಿಂದ ಪಡಿತರ ಚೀಟಿ ವಿತರಣೆ ವಿಳಂಬವಾಗಿದೆ ಎಂದರು. ಉಳಿದ ಅರ್ಜಿದಾರರ ಮನೆ ಮನೆ ಸಮೀಕ್ಷೆ, ದತ್ತಾಂಶ ಸಂಗ್ರಹ ಕಾರ್ಯ ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ಬಿಪಿಎಲ್ ಕಾರ್ಡ್ ನೀಡಲಾಗುವುದು. ಇಲಾಖೆ ಕೈಗೊಂಡ ವಿಶೇಷ ಕ್ರಮದಿಂದ ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಉಳಿದವರ ಹೊಂದಿದ್ದ 13 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ವಾಪಸ್ ಪಡೆಯಲಾಗಿದೆ ಎಂಬ ಕತ್ತಿ ಮಾಹಿತಿ ನೀಡಿದರು.
ನಿಯಂತ್ರಣ ಅಸಾಧ್ಯ: ಕಚ್ಚಾ ತೈಲ, ಖಾದ್ಯ ತೈಲ ಹಾಗೂ ಕಬ್ಬಿಣದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆ ಅವಲಂಬಿತವಾದ ಕಾರಣ ಮುಕ್ತ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ನಿಯಂತ್ರಣ ಅಸಾಧ್ಯ. ಆದರೆ ಕೃತಕ ಅಭಾವ ಸೃಷ್ಟಿ, ಅಧಿಕ ಬೆಲೆಗೆ ಮಾರಾಟ ತಡೆಗೆ ಅಗತ್ಯ ಕ್ರಮವಹಿಸಲಾಗಿದೆ ಎಂದು ಕಾಂಗ್ರೆಸ್ನ ಎಸ್.ರವಿ ಪ್ರಶ್ನೆಗೆ ಉಮೇಶ್ ಕತ್ತಿ ಉತ್ತರಿಸಿದರು. ಖಾದ್ಯತೈಲ ಅಕ್ರಮ ದಾಸ್ತಾನು, ಅಧಿಕ ಬೆಲೆಗೆ ಮಾರಾಟ ನಿಯಂತ್ರಣಕ್ಕಾಗಿ ಕಳೆದ 1,368 ತಪಾಸಣೆಗಳಾಗಿವೆ. ಹೆಚ್ಚಿನ ಬೆಲೆಗೆ ಮಾರಾಟಕ್ಕೆ ಸಂಬಂಧಿಸಿ ಇದುವರೆಗೆ 75 ಮೊಕದ್ದಮೆಗಳನ್ನು ಹೂಡಿದ್ದು, 29 ದಾವೆಗಳಲ್ಲಿ 2,96,000 ರೂ. ದಂಡ ವಸೂಲಿ ಮಾಡಲಾಗಿದೆ. ಡಿಸೇಲ್ ಹಾಗೂ ಪೆಟ್ರೋಲ್ ಮೇಲೆ ರಾಜ್ಯ ವಿಧಿಸುತ್ತಿರುವ ಸೆಸ್ ಇಳಿಕೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಸೆಸ್ ಪರಿಷ್ಕರಣೆ ವಿಷಯವು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದು ಎಂದು ಉಮೇಶ್ ಕತ್ತಿ ಸ್ಪಷ್ಟಪಡಿಸಿದರು.
ನೇಕಾರರಿಗೂ ಯಶಸ್ವಿನಿ ವಿಸ್ತರಿಸಿ: ನೇಕಾರರಿಗೂ ಯಶಸ್ವಿನಿ ಯೋಜನೆ ವಿಸ್ತರಿಸಿ ಎಂದು ಬಿಜೆಪಿಯ ದೊಡ್ಡನಗೌಡ ಹಾಗೂ ಸಿದ್ದು ಸವದಿ ಸರ್ಕಾರವನ್ನು ಒತ್ತಾಯಿಸಿದರು. ಸಹಕಾರ ಇಲಾಖೆಯ ಬೇಡಿಕೆ ಮೇಲಿನ ಚರ್ಚೆಗೆ ಸಚಿವ ಎಸ್.ಟಿ. ಸೋಮಶೇಖರ್ ಉತ್ತರಿಸುವ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಸದಸ್ಯರು, ನೇಕಾರರೂ ಸಂಕಷ್ಟದಲ್ಲಿದ್ದಾರೆ. ಅವರಿಗೂ ಈ ಯೋಜನೆ ಪ್ರಯೋಜನ ಕೊಡಿ ಎಂದು ಕೇಳಿದರು. ಇದಕ್ಕೆ ಸ್ಪಷ್ಟ ಉತ್ತರ ನೀಡದ ಎಸ್.ಟಿ.ಸೋಮಶೇಖರ್, ಸಹಕಾರ ಸಂಘಗಳ ವಂತಿಗೆ ಸೇರಿ 300 ಕೋಟಿ ರೂ.ಗಳನ್ನು ಯಶಸ್ವಿನಿ ಯೋಜನೆಗೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ ಎಂದರು. ನಿರ್ದಿಷ್ಟ ದಾಖಲೆ ಸಲ್ಲಿಸದ 13,500 ರೈತರ ಸಾಲಮನ್ನಾ ಮಾಡಲಾಗಿಲ್ಲ. ಅನೇಕ ಬಾರಿ ನೋಟಿಸ್ ನೀಡಿದರೂ ಯಾವುದೇ ಸಕಾರಾತ್ಮಕ ಉತ್ತರ ಬಂದಿಲ್ಲ. ಅಂತಹವರಿಗೆ ಇನ್ನೊಂದು ಅವಕಾಶ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದರು. 31 ಸಾವಿರ ರೈತರ ಹಸಿರು ಪಟ್ಟಿ ಸಿದ್ಧವಾಗಿದೆ. ಆರ್ಥಿಕ ಇಲಾಖೆ ಜತೆ ರ್ಚಚಿಸಿ ಏಪ್ರಿಲ್ನಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ಸೋಮಶೇಖರ್ ಹೇಳಿದರು.