ಬೆಳಗಾವಿ: ಸ್ವತಂತ್ರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸ್ಮರಣೆಗಾಗಿ ಕರ್ನಾಟಕ ಸರ್ಕಾರ ಬೆಳಗಾವಿ ಜಿಲ್ಲೆಯ ಸಂಗೋಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಸೈನಿಕ ಶಾಲೆಯನ್ನು ಕೇಂದ್ರ ರಕ್ಷಣಾ ಇಲಾಖೆಯ ಅಧೀನದಲ್ಲಿ ತೆಗೆದುಕೊಳ್ಳುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿರುವುದು ಸ್ವಾಗತಾರ್ಹ ಎಂದು ಸಂಸದ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು.
ರವಿವಾರ ಮಾ-27 ರಂದು ಪತ್ರಿಕಾ ಹೇಳಿಕೆ ನೀಡಿರುವ ಸಂಸದ ಈರಣ್ಣ ಕಡಾಡಿ ಅವರು ದೇಶಾದ್ಯಂತ 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸುವ ಕೇಂದ್ರ ಸರ್ಕಾರದ ಉಪಕ್ರಮದ ಆರಂಭಿಕ ಸುತ್ತಿನಲ್ಲಿ ಎನ್‍ಜಿಒಗಳು/ಖಾಸಗಿ ಶಾಲೆಗಳು/ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ 21 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸಲು ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ಅದರಲ್ಲಿ ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯು ಸೇರಿದೆ.
ಜಿಲ್ಲೆಯ ಸಂಗೊಳ್ಳಿ ಗ್ರಾಮದ 100 ಎಕರೆ ಜಾಗದಲ್ಲಿ ಸುಮಾರು 230 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಅದನ್ನು ಕೇಂದ್ರ ರಕ್ಷಣಾ ಸಚಿವಾಲಯ ತನ್ನ ಅಧೀನಕ್ಕೆ ಪಡೆದು ಮುನ್ನಡಿಸಿಕೊಂಡು ಹೊಗಲು ಕರ್ನಾಟಕ ಸರ್ಕಾರ ಈಗಾಗಲೇ ಮನವಿ ಮಾಡಿತ್ತು.ಸದರಿ ವಿಷಯದ ಕುರಿತು ನಾನು ಕೂಡಾ ಕೇಂದ್ರ ಸಚಿವರಿಗೆ ಪತ್ರ ಮುಖೇನ ಒತ್ತಾಯ ಮಾಡಿದ್ದೇ, ಅಲ್ಲದೇ ಮಾರ್ಚ 15 ರಂದು ರಾಜ್ಯಸಭೆಯ ಕಲಾಪದ ಶೂನ್ಯವೇಳೆಯಲ್ಲಿ ಈ ವಿಷಯವಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿತ್ತು.
ಕರ್ನಾಟಕದ ಜನತೆಯ ಮನವಿಯನ್ನು ಗಮನಿಸಿ ಕೇಂದ್ರ ರಕ್ಷಣಾ ಸಚಿವಾಲಯ ಸೈನಿಕ ಶಾಲೆಯನ್ನು ತನ್ನ ಅಧೀನದಲ್ಲಿ ಮುನ್ನಡಿಸಿಕೊಂಡು ಹೊಗಲಿಕ್ಕೆ ಅನುಮೋದನೆ ನೀಡಿರುವುದು ಇದು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಮೂರು ರಾಜ್ಯಗಳ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ ಹಾಗೂ ಹೊಸ ಸೈನಿಕ ಶಾಲೆಯು ಈಗಿರುವ ಶಾಲೆಗಳಿಗಿಂತ ಅತ್ಯಂತ ವಿಭಿನ್ನವಾಗಿ ಕಾರ್ಯನಿರ್ವಹಿಸಲಿವೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.