ಬೆಂಗಳೂರು: ಜಾತ್ರೆ ವೇಳೆ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಸ್ಲಿಮರು ಅಂಗಡಿ ಮುಂಗಟ್ಟು ಹಾಕದಂತೆ ನಿಷೇಧಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದ ಬೆಂಗಳೂರಿನ ಬೀದಿಬದಿ ವ್ಯಾಪಾರಿಗಳು, ರಾಜ್ಯದಲ್ಲಿ ಬಲಪಂಥೀಯ ಸಂಘಟನೆಗಳು ಕೋಮುವಾದದ ವಿಷಬೀಜ ಬಿತ್ತಲು ಯತ್ನಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ ಮತ್ತು ಇತರ ಮಿತ್ರ ಸಂಘಟನೆಗಳು ಕರ್ನಾಟಕದಲ್ಲಿ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯದ ಮೇಲಿನ ಕೋಮು ದಾಳಿಯನ್ನು ಖಂಡಿಸಿವೆ.
‘ವಿಶ್ವ ಹಿಂದೂ ಪರಿಷತ್ತು ದೇವಸ್ಥಾನದ ಆಡಳಿತ ಸಮಿತಿಗಳ ಮೇಲೆ ಒತ್ತಡ ಹೇರುತ್ತಿದೆ ಮತ್ತು ದೇವಸ್ಥಾನಗಳ ಜಾತ್ರೆಗಳು, ವಾರ್ಷಿಕ ಹಬ್ಬಗಳು ಮತ್ತು ಧಾರ್ಮಿಕ ಉತ್ಸವಗಳಲ್ಲಿ ಹಿಂದೂಯೇತರ ವ್ಯಾಪಾರಿಗಳು ಅಂಗಡಿಗಳನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದೆ. ಸಂಘಪರಿವಾರದ ಈ ಬೇಡಿಕೆಗೆ ಬಿಜೆಪಿ ಸರಕಾರ ಒಪ್ಪಿಕೊಳ್ಳುತ್ತಿದೆ ಎಂಬುದನ್ನು ಸಚಿವರ ವಿವಿಧ ಹೇಳಿಕೆಗಳಿಂದ ಸ್ಪಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಬೀದಿಬದಿ ವ್ಯಾಪಾರಿಗಳು ನಗರ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರಿಂದ ಪ್ರತಿನಿತ್ಯ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಅವರು, ಕೆಲ ದಿನಗಳಿಂದ ಕೋಮು ಧ್ರುವೀಕರಣ ನಡೆಯುತ್ತಿದ್ದು, ಇದೀಗ ನಮ್ಮ ಮೇಲೆ ಪೂರ್ಣ ಪ್ರಮಾಣದಲ್ಲಿ ದಾಳಿ ಮಾಡಲಾಗುತ್ತಿ ಎಂದು ಆರೋಪಿಸಿದ್ದಾರೆ.
“ಮಂಗಳೂರಿನ ಉಪ್ಪಿನಂಗಡಿಯಲ್ಲಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಕೋಮುವಾದಿ ಗೂಂಡಾಗಳ ಗುಂಪೊಂದು ಮುಸ್ಲಿಂ ಐಸ್ ಕ್ರೀಮ್ ಮಾರಾಟಗಾರನನ್ನು ಥಳಿಸಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ವಿಜಯನಗರದಲ್ಲಿ ಮುಸ್ಲಿಮರ ಅಂಗಡಿಗಳ ಮೇಲೆ ಹಿಂದೂ ಧಾರ್ಮಿಕ ಧ್ವಜ ಹಾರಿಸಲಾಗಿತ್ತು. ಆದರೆ, ಮಾರಾಟಗಾರರು ಒಗ್ಗಟ್ಟಾಗಿ ಆ ಧ್ವಜಗಳನ್ನು ತೆಗೆದುಹಾಕಿದರು ಎಂದಿದ್ದಾರೆ.