ಬೆಂಗಳೂರು: ‘ಬಿಜೆಪಿಯವರು ಭ್ರಷ್ಟರು, ಭಂಡರು. ತಮ್ಮ ಹುಳುಕು ಗೊತ್ತಾಗುತ್ತದೆ ಎಂದು ಚರ್ಚೆಗೆ ಅವಕಾಶ ಕೊಡಲಿಲ್ಲ. ಪೊಲೀಸ್, ಸಾರಿಗೆ ಮತ್ತು ಆರೋಗ್ಯ ಇಲಾಖೆಗಳಲ್ಲಿನ ವ್ಯಾಪಕ ಭ್ರಷ್ಟಾಚಾರ ವರದಿಗಳು ಪ್ರಕಟ ಆಗಿವೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ವಿರೋಧ ಪಕ್ಷಗಳು ಸುಮ್ಮನಿರಬೇಕಾ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ವಿಧಾನಸಭೆಯ ಮೊಗಸಾಲೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಬಿಎಂಪಿ, ಗ್ರಾಮೀಣಾಭಿವೃದ್ಧಿ, ನೀರಾವರಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ಪ್ರಸ್ತಾಪಿಸುವುದು ಬಿಜೆಪಿಯವರಿಗೆ ಬೇಕಿಲ್ಲ. ಅದಕ್ಕಾಗಿ ತಡೆ ಒಡ್ಡಿದ್ದಾರೆ ಎಂದರು.
ಯಡಿಯೂರಪ್ಪ ಅವರ ಮನೆಯಲ್ಲೇ ಭ್ರಷ್ಟಾಚಾರ ನಡೆಯುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಲ್ಲವೇ? ಕೃಷ್ಣಾ ಮೇಲ್ದಂಡೆ ಯೋಜನೆಗೆ ₹20 ಸಾವಿರ ಕೋಟಿ ಟೆಂಡರ್ ಕರೆದಿದ್ದಾರೆ. ಇದರಲ್ಲಿ ಶೇ 10 ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ತಮ್ಮ ಸರ್ಕಾರದ ವಿರುದ್ಧವೇ ಆರೋಪ ಮಾಡಿಲ್ಲವೆ? ಅವರ ಪಕ್ಷದವರೇ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇಂತಹ ಲೂಟಿಯನ್ನು ತಡೆಯುವುದು ನಮ್ಮ ಕರ್ತವ್ಯವಲ್ಲವೇ ಎಂದು ಪ್ರಶ್ನಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಿಗೆ ಪತ್ರ ಬರೆದು ಸುಮ್ಮನೆ ಕೂರಲಿಲ್ಲ. ಮಾಧ್ಯಮಗಳೆದುರು ಹೋಗಿದ್ದಾರೆ. ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ. ಅವರ ಪತ್ರ ಬಂದ ಮೇಲೆ ಪ್ರಧಾನ ಮಂತ್ರಿಗಳು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಮೋದಿ ಅವರು ತಮ್ಮನ್ನು ಚೌಕಿದಾರ್ ಎಂದು ಹೇಳಿಕೊಳ್ಳುತ್ತಾರೆ. ನಾ ಖಾವೂಂಗ, ನಾ ಖಾನೆದೂಂಗ ಎಂದರೆ ಇದೇನಾ ಎಂದರು.