ಹಾನಗಲ್ಕುಟುಂಬದ ಆಸ್ತಿಯನ್ನೆಲ್ಲ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು ಬೇರೆಯಾಗಿ ಉಳಿದು, ಜೀವನದ ಮುಸ್ಸಂಜೆಯಲ್ಲಿರುವ ತಂದೆ-ತಾಯಿಯನ್ನು ಬೀದಿಪಾಲು ಮಾಡಿದ ಮಕ್ಕಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ತಕ್ಕ ಪಾಠ ಕಲಿಸಿದ್ದಾರೆ.
ಹಾನಗಲ್ ತಾಲೂಕಿನ ಹಿರೇಬಾಸೂರ ಗ್ರಾಮದ 80 ವರ್ಷದ ವೃದ್ಧ ರುದ್ರಗೌಡ ಬಸನಗೌಡ ಪಾಟೀಲ ಹಾಗೂ ನೀಲಮ್ಮ ಪಾಟೀಲ ದಂಪತಿ ಹೆಸರಿನಲ್ಲಿದ್ದ ಎಲ್ಲ ಆಸ್ತಿಯನ್ನೂ ಮಕ್ಕಳು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ನಂತರ, ತಂದೆ ತಾಯಿಯನ್ನು ನೋಡಿಕೊಳ್ಳದೆ ಬೇರೆಯಾಗಿ ಉಳಿದಿದ್ದರು. ಅವರ ಈ ಧೋರಣೆಯಿಂದ ಬೇಸತ್ತ ದಂಪತಿ ಸವಣೂರು ಉಪವಿಭಾಗಾಧಿಕಾರಿ (ಎ.ಸಿ.) ಮೊರೆ ಹೋಗಿದ್ದರು.
ಈ ವಿಶೇಷ ಪ್ರಕರಣದ ಕುರಿತು ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ನ್ಯಾಯಮಂಡಳಿಯಲ್ಲಿ ವಿಚಾರಣೆ ನಡೆಸಿದ ಎಸಿ, ಮಕ್ಕಳಿಂದ ಎಲ್ಲ ಆಸ್ತಿಯನ್ನೂ ಮರಳಿ ವೃದ್ಧರ ಹೆಸರಿಗೆ ವರ್ಗಾಯಿಸಿದ್ದಾರೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಎ.ಸಿ. ಅವರೇ ಸ್ವತಃ ಅರ್ಜಿದಾರರ ಮನೆಗೆ ತೆರಳಿ ತಲುಪಿಸಿದ್ದಾರೆ.
ರುದ್ರಗೌಡ ಪಾಟೀಲ ಅವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿಗೆ ಶೇಖರಗೌಡ ಹಾಗೂ ಗಿರಿಜವ್ವ ಎಂಬ ಮಕ್ಕಳಿದ್ದಾರೆ. ಎರಡನೇ ಪತ್ನಿ ಮೃತಪಟ್ಟಿದ್ದು, ಅವರಿಗೆ ಬಸನಗೌಡ ಹಾಗೂ ಶಾರದಾ ಎಂಬ ಮಕ್ಕಳಿದ್ದಾರೆ. ಈಗ ರುದ್ರಗೌಡ ಮೊದಲ ಹೆಂಡತಿಯೊಂದಿಗೆ ವಾಸವಾಗಿದ್ದಾರೆ.
ಪಿತ್ರಾರ್ಜಿತವಾಗಿ ತಮಗೆ ಬಂದಿರುವ, ತಮ್ಮ ಹೆಸರಿನಲ್ಲಿರುವ 5.09 ಎಕರೆ ಭೂಮಿಯನ್ನು ನಾಲ್ವರೂ ಮಕ್ಕಳು ಸೇರಿ ತಮಗೆ ತಿಳಿಯದಂತೆ ಸಮನಾಗಿ 2018ರಲ್ಲಿ ಹಂಚಿಕೊಂಡಿದ್ದಾರೆ. ಹೊಲವನ್ನೂ ಉಳುಮೆ ಮಾಡದೇ ಗುತ್ತಿಗೆ ನೀಡಿ ಹಣ ಪಡೆದುಕೊಂಡಿದ್ದಾರೆ. ಹೊಲಗಳ ಮೇಲೂ ಸಾಲ ಪಡೆದುಕೊಂಡಿದ್ದಾರೆ. ಇತ್ತ ನಮ್ಮನ್ನೂ ನೋಡಿಕೊಳ್ಳದೆ ಬೀದಿಪಾಲು ಮಾಡಿದ್ದಾರೆ ಎಂದು ಎಸಿ ಅನ್ನಪೂರ್ಣ ಮುದುಕಮ್ಮನವರ ಅವರಿಗೆ ರುದ್ರಗೌಡರು 2021ರ ನವೆಂಬರ್‌ನಲ್ಲಿ ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಎಸಿ, ವೃದ್ಧ ದಂಪತಿಯ ಪಾಲನೆ-ಪೋಷಣೆ ಮಾಡದೆ ಅವರಿಂದ ಆಸ್ತಿ ಪಡೆದು ಜೀವ ಬೆದರಿಕೆ ಹಾಕುತ್ತಿರುವುದು, ಆಸ್ತಿಗಳ ಮೇಲೆ ಸಾಲ ಪಡೆದು ತೀರಿಸದೇ ಇರುವುದು, ವೃದ್ಧಾಪ್ಯದಲ್ಲಿ ತಂದೆ-ತಾಯಿಗೆ ಜೀವನೋಪಾಯಕ್ಕೆ ಮಕ್ಕಳು ಸಮಸ್ಯೆ ತಂದಿಟ್ಟಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅವರ ಒಟ್ಟು 5.09 ಎಕರೆ ಆಸ್ತಿಯನ್ನೂ ಮರಳಿ ರುದ್ರಗೌಡ ಪಾಟೀಲ ಅವರ ಹೆಸರಿಗೆ ವರ್ಗಾಯಿಸಬೇಕು ಎಂದು ಆದೇಶಿಸಿದ್ದಾರೆ.
ಮಾ.21ರಂದು ತಹಸೀಲ್ದಾರ್ ಪಿ.ಎಸ್. ಸ್ವಾಮಿ ಅವರೊಂದಿಗೆ ಹಿರೇಬಾಸೂರಿಗೆ ತೆರಳಿದ ಎಸಿ ಅನ್ನಪೂರ್ಣ ಅವರು, ರುದ್ರಗೌಡರ ಹೆಸರಿಗೆ ಆಸ್ತಿಯನ್ನು ವರ್ಗಾಯಿಸಿರುವ ಕಂದಾಯ ದಾಖಲೆಗಳನ್ನು ಹಸ್ತಾಂತರಿಸಿದರು. ಕಂದಾಯ ನಿರೀಕ್ಷಕ ಬಿ.ಎಲ್.ಪೂಜಾರಿ ಇದ್ದರು.
ಮಕ್ಕಳು ತಮ್ಮನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳುತ್ತಾರೆಂಬ ನಂಬಿಕೆಯಿಂದ ತಂದೆ-ತಾಯಿ ತಾವು ಗಳಿಸಿದ ಮತ್ತು ಹಿರಿಯರಿಂದ ಬಂದ ಆಸ್ತಿಯನ್ನು ಮಕ್ಕಳಿಗೆ ನೀಡುತ್ತಾರೆ. ಆಸ್ತಿ ಸಿಕ್ಕ ನಂತರ ಅವರನ್ನು ನೋಡಿಕೊಳ್ಳದೇ ನಿರ್ಲಕ್ಷ್ಯ ಮಾಡುವ ಮಕ್ಕಳ ವರ್ತನೆ ಖಂಡನೀಯ. ಇದರಿಂದಾಗಿ, ವೃದ್ಧರು ತಮ್ಮ ಜೀವಿತಾವಧಿವರೆಗೂ ತಮ್ಮ ಹೆಸರಿನಲ್ಲೇ ಆಸ್ತಿಗಳನ್ನು ಇರಿಸಿಕೊಳ್ಳುವ ನಿರ್ಣಯಕ್ಕೆ ಬರುವಂತಾಗುತ್ತದೆ.