Breaking News

ಗೋಕಾಕ ಫಾಲ್ಸ್ | Gokak Falls : ‘ನಾನೊಬ್ಬ ದೇವದಾಸಿಯ ಮಗಳು.

Spread the love

Gokak Falls: ಮಾನ್ಯ ಉನ್ನತ ಶಿಕ್ಷಣ ಸಚಿವರೇ, ತೀರ್ಮಾನಕ್ಕೆ ಮೊದಲು ಇನ್ನೂ ಒಮ್ಮೆ ಯೋಚಿಸಿ

ಬಡತನ, ಅವಮಾನ, ಸಂಕಟಗಳೆಲ್ಲ ನಮ್ಮ ಜೊತೆಗಾರರನ್ನಾಗಿಸಿಕೊಂಡು ಬೆಳೆದವಳು. ಚಿಕ್ಕಂದಿನಿಂದಲೂ ತುಂಬಾ ಓದಬೇಕು ಎಂಬ ಮಹದಾಸೆ ಇತ್ತು. ಡಿಗ್ರಿ ಮುಗಿದ ಮೇಲೆ ಉನ್ನತ ಶಿಕ್ಷಣಕ್ಕೆ ಹೋಗುವ ಅವಕಾಶವಿರದೆ ಅಲ್ಲಿಗೇ ಓದು ನಿಲ್ಲಿಸಿದ್ದೆ. ನಂತರ ಆರಂಭವಾದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ನನ್ನ ಪಾಲಿನ ದಾರಿದೀಪವಾಯಿತು. ಸ್ನಾತಕೋತ್ತರ ಪದವಿ ಮುಗಿಸಿ, ಸಂಶೋಧನೆ ಮುಗಿಸಿ ಇದೀಗ ಉನ್ನತ ಹುದ್ದೆಯಲ್ಲಿ ಇದ್ದೇನೆ. ನನ್ನ ಈ ದಾರಿ ನಮ್ಮ ಸಮುದಾಯದ ಅನೇಕ ಮಹಿಳೆಯರ ಉನ್ನತ ಶಿಕ್ಷಣಕ್ಕೆ ಸ್ಪೂರ್ತಿ ಆಯಿತು.’ ಕರ್ನಾಟಕ ರಾಜ್ಯ ಅಕ್ಕಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿನಿಯ ಮಾತುಗಳಿವು. ಈ ಸಾಲುಗಳೇ ಸಾಕೆನ್ನಿಸುತ್ತದೆ ಮಹಿಳಾ ವಿವಿ ಸಾಧನೆಯನ್ನು ಹೇಳಲು. ಸಮಾಜದ ಅಂಚಿನಲ್ಲಿ ಉಳಿದ ಹೆಣ್ಣುಮಕ್ಕಳನ್ನು ಮುಖ್ಯವಾಹಿನಿಗೆ ತಂದ ಕೀರ್ತಿ ಈ ವಿವಿಗೆ ಇದೆ. ಹಾಗೆಯೇ ಇನ್ನೊಬ್ಬ ಹೆಣ್ಣುಮಗಳು ಎರಡು ಮಕ್ಕಳ ತಾಯಿಯಾದ ಮೇಲೆ ಸ್ನಾತಕೋತ್ತರ, ಸಂಶೋಧನೆ ಮುಗಿಸಿ ಇಂದು ಅಧಿಕಾರಿಯಾಗಿದ್ದಾಳೆ. ನೊಂದ ಮಹಿಳೆಯರ ಪರನಿಂತು ಅವರ ಜೀವನ ಹಸನು ಮಾಡುತ್ತಿದ್ದಾಳೆ. ಇದೆಲ್ಲ ನೋಡಿದಾಗ ನಾನು ಓದುತ್ತಿರುವ ವಿಶ್ವವಿದ್ಯಾನಿಲಯದ ಕುರಿತು ಹೆಮ್ಮೆ ಎನಿಸುತ್ತದೆ.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿದೆ. ಆದರೆ ಇಲ್ಲಿ ಆ ಹೆಣ್ಣುಮಕ್ಕಳಿಗಾಗಿಯೇ ಪ್ರತ್ಯೇಕ ವಿಶ್ವವಿದ್ಯಾನಿಲಯ ನಿರ್ಮಿಸಿ, ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣ ಎಂಬ ಧ್ಯೇಯವನ್ನು ಹೊತ್ತು ಅದರ ಸಾಧನೆಗೆ ಶ್ರಮಿಸುತ್ತಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವನ್ನು ಮುಚ್ಚುವ ಹುನ್ನಾರಗಳು ನಡೆದಿವೆ. ಕಳೆದ ಕೆಲವು ದಿನಗಳಿಂದ ಇಂತಹ ಊಹಾಪೋಹಗಳ ಗಾಳಿ ಹಾರಾಡುತ್ತಲೇ ಇತ್ತು. ಇದೀಗ ನಮ್ಮ ಉನ್ನತ ಶಿಕ್ಷಣ ಸಚಿವರೇ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವನ್ನು ಸಹಶಿಕ್ಷಣ (C0-education) ವನ್ನಾಗಿಸಬೇಕೆಂದು ಖುದ್ದಾಗಿ ಹೇಳಿದ್ದಾರೆ. 13 ಜಿಲ್ಲೆಗಳಲ್ಲಿ ಹಬ್ಬಿರುವ ಅದರ ವ್ಯಾಪ್ತಿಯನ್ನು ಕಿತ್ತೆಸೆದು, ಅದನ್ನು ಕೇವಲ ಕ್ಯಾಂಪಸ್ ಬೇಸ್ಡ್ ವಿಶ್ವವಿದ್ಯಾಲಯವನ್ನಾಗಿ ಮಾರ್ಪಡಿಸುವ ಯೋಚನೆ ಇದೆ ಎಂದಿದ್ದಾರೆ. ಅನೇಕ ಬಾರಿ ನಮ್ಮ ಜನಪ್ರತಿನಿಧಿಗಳ ಮಾತು, ಅವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಸರಿಯಾದ ಮಾನದಂಡವೇ ಇರುವುದಿಲ್ಲ. ಅವರು ಕೊಡುವ ಕಾರಣಗಳು ಅಷ್ಟೇ ಬಾಲಿಶ ಎಂಬಂತೆ ಕಾಣುತ್ತವೆ. ಈ ವಿವಿಯನ್ನು ಸೀಮಿತಗೊಳಿಸುವ ನಿರ್ಧಾರವನ್ನು ನಾನು ಇದೇ ಸಾಲಿನಲ್ಲಿ ಸೇರಿಸುತ್ತೇನೆ.

2002 ರಲ್ಲಿ ಡಾ. ಡಿ.ಎಂ. ನಂಜುಂಡಪ್ಪ ವರದಿ ಆಧರಿಸಿ ಈ ವಿಶ್ವವಿದ್ಯಾನಿಲಯವನ್ನು ಆರಂಭಿಸಲಾಗಿತ್ತು. 2017 ರಲ್ಲಿ ಅಕ್ಕಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಎಂದು ಮರುನಾಮಕರಣ ಮಾಡಲಾಗಿತ್ತು. ಆದರೆ ಈಗ ದಿಢೀರನೆ ‘ಮಹಿಳಾ’ ಎಂಬ ಪದವನ್ನು ತೆಗೆದು ಹಾಕಲು ಮುಂದಾಗಿದ್ದು ಏಕೆ ಎನ್ನುವುದೇ ಅರ್ಥವಾಗುತ್ತಿಲ್ಲ.
ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕೆ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಈ ವಿವಿ ಗಣನೀಯ ಪಾತ್ರ ನಿರ್ವಹಿಸಿದ್ದು ಎಲ್ಲರಿಗೂ ಗೊತ್ತಿರುವಂತಹದ್ದೇ. ಅದನ್ನು ಸಾಬೀತು ಮಾಡಲು ಪ್ರತ್ಯೇಕ ಸಾಕ್ಷಿಗಳನ್ನು ಹಿಡಿದು ನಿಲ್ಲುವ ಅನಿವಾರ್ಯ ಬರದಿರಲಿ. ಸಮಾಜದ ಗಮನದಿಂದ ದೂರ ಉಳಿದ, ಆರ್ಥಿಕವಾಗಿ ಹಿಂದುಳಿದ, ಅಲ್ಪಸಂಖ್ಯಾತ ಸಮದಾಯದ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಈ ವಿವಿ ಏಕಮಾತ್ರ ತಾಣವಾಗಿರುವುದು ಸುಳ್ಳಲ್ಲ.

ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಹೆಣ್ಣುಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸಲು ಅನೇಕರು ಇನ್ನೂ ಹಿಂಜರಿಯುತ್ತಾರೆ. ಬಡತನ, ಅಜ್ಞಾನ, ಹೆಣ್ಣು ಎಂಬ ಜಿಜ್ಞಾಸೆ, ಹೊರಗಿನ ವಾತಾವರಣ ಹೆಣ್ಣಿಗೆ ಅಸುರಕ್ಷತೆ ಎಂಬ ಅಳುಕು ಇವೆಲ್ಲವೂ ಅವರ ಆತಂಕಕ್ಕೆ ಕಾರಣಗಳು; ಹೆಣ್ಣಿಗೆ ಹಲವಾರು ಕಾರಣಗಳಿಂದಾಗಿ ಅಸುರಕ್ಷೆ ಅನುಭವಿಸುವಂತೆ ನಮ್ಮ ಸಮಾಜ ರೂಪುಗೊಂಡಿದೆ. ‘ಗಂಡು’ಕುಲ ಅಂತಹ ಭಯವನ್ನು ಸೃಷ್ಟಿಸಿ ಇಟ್ಟಿದೆ. ಹೀಗಾಗಿ ಹೆಣ್ಣುಮಕ್ಕಳನ್ನು ಓದಿಗಾಗಿ, ಉದ್ಯೋಗಕ್ಕಾಗಿ ಹೊರ ಕಳಿಸಲು ನಿರಾಕರಿಸುವುದು ಈ ಭಯದ ವ್ಯತಿರಿಕ್ತ ಪರಿಣಾಮವೇ ಆಗಿದೆ.


Spread the love

About Laxminews 24x7

Check Also

ಬಿಡಿಸಿಸಿ ಬ್ಯಾಂಕಿನ‌ ಚುನಾವಣೆ ಬಾಲಚಂದ್ರ ಜಾರಕಿಹೊಳಿಯವರು ಅವಿರೋಧ ಆಯ್ಕೆಯ ಸಂಬಂಧ ಅಲ್ಲಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

Spread the loveಬೆಳಗಾವಿ- ಬಿಡಿಸಿಸಿ ಬ್ಯಾಂಕಿನ‌ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಅವಿರೋಧ ಆಯ್ಕೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ