ಸಹರಾನ್ಪುರ (ಉತ್ತರಪ್ರದೇಶ): ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವ ಕೆಲ ದುಷ್ಕರ್ಮಿಗಳು ಆತನ ಹಣೆ ಮೇಲೆ ಆ್ಯಸಿಡ್ನಿಂದ ತ್ರಿಶೂಲ ಬಿಡಿಸಿ, ಚಿತ್ರಹಿಂಸೆ ನೀಡಿರುವ ಘಟನೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾಗಿರುವ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾನೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಸಹರಾನ್ಪುರ್ ಜಿಲ್ಲೆಯ ಆದೇಶ್ ಎಂಬ ದಲಿತ ಯುವಕನಿಗೆ ಹೋಳಿ ಹಬ್ಬದ ದಿನ ವಿಶಾಲ್ ರಾಣಾ ಎಂಬ ಮೇಲ್ಜಾತಿ ವ್ಯಕ್ತಿ ಫೋನ್ ಮಾಡಿ ಕರೆಯಿಸಿಕೊಂಡಿದ್ದು, ತಾನು ಮದ್ಯಪಾನ ಮಾಡ್ತಿದ್ದ ಗ್ಲಾಸ್ ಕ್ಲೀನ್ ಮಾಡುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಗ್ಲಾಸ್ ಆದೇಶ್ ಕಾಲಿನ ಮೇಲೆ ಬಿದ್ದಿದೆ. ಇದರಿಂದ ಆಕ್ರೋಶಗೊಂಡಿರುವ ಆತ ತನ್ನ ಸಹಚರರೊಂದಿಗೆ ಸೇರಿಕೊಂಡು ಥಳಿಸಿದ್ದಾನೆ.ಇದರ ಬೆನ್ನಲ್ಲೇ ಆತನ ಕೈ-ಕಾಲು ಹಿಡಿದುಕೊಂಡು ಹಣೆಯ ಮೇಲೆ ಆ್ಯಸಿಡ್ ಎರಚಿದ್ದು, ತದನಂತರ ತ್ರಿಶೂಲ ಬಿಡಿಸಿದ್ದಾರೆ. ಈ ವೇಳೆ ಹಲ್ಲೆ ಮಾಡದಂತೆ ಮನವಿ ಮಾಡಿದ್ರೂ ಆತನ ಮಾತು ಯಾರೂ ಕೇಳಿಲ್ಲ. ಅವರ ಕೈಯಿಂದ ತಪ್ಪಿಸಿಕೊಂಡು ಬಂದಿರುವ ವ್ಯಕ್ತಿ ಮನೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾನೆ. ಇದರ ಬೆನ್ನಲ್ಲೇ ಪೊಲೀಸ್ ಠಾಣೆಗೆ ತೆರಳಿರುವ ಕುಟುಂಬಸ್ಥರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
Laxmi News 24×7