ಹಣ ಲೂಟಿ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದು, ಇದರಿಂದ ಕರ್ನಾಟಕವು ಬಿಹಾರ ಆಗುವತ್ತ ಸಾಗುತ್ತಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಳವಳ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ‘ರಾಜ್ಯದಲ್ಲಿ ಕೆಲವು ಜಿಲ್ಲಾಧಿಕಾರಿ, ವಿಭಾಗಾಧಿಕಾರಿಗಳು ಲೂಟಿ ಮಾಡಿದ್ದಾರೆ. ಇದು ಸಾಧ್ಯವಾಗಿದ್ದು ಯಾರಿಂದ? ಮೊದಲಿಗೆ ನಾವು (ರಾಜಕಾರಣಿಗಳು) ತಿನ್ನುವುದು ನಿಲ್ಲಿಸಬೇಕು’ ಎಂದರು.
‘ವಿಧಾನಪರಿಷತ್ ಚುನಾವಣೆಯಲ್ಲಿ ₹ 25 ಕೋಟಿಯಿಂದ ₹ 50 ಕೋಟಿಗೂ ಹೆಚ್ಚು ಹಣ ಖರ್ಚು ಮಾಡುತ್ತಾರೆ ಎಂದರೆ ಪರಿಸ್ಥಿತಿ ಎಲ್ಲಿಗೆ ಹೋಗಿದೆ ಎಂಬುದನ್ನು ಊಹಿಸಬಹುದು. ನಾವು ರಾಜಕಾರಣಿಗಳು ಹೇಗೆ ಇರುತ್ತೇವೆ ಎಂಬುದು ಮುಖ್ಯ. ನಾವು ಸರಿ ಆದರೆ ವ್ಯವಸ್ಥೆಯೂ ಬದಲಾವಣೆ ಆಗುತ್ತದೆ’ ಎಂದರು.
ಈ ಹಂತದಲ್ಲಿ ಕಾಂಗ್ರೆಸ್‌ನ ಕೆ.ಆರ್.ರಮೇಶ್‌ಕುಮಾರ್, ‘ದುಡ್ಡು ಹೇಗೆ ತಿನ್ನುತ್ತಾರೆ ಎಂಬ ಬಗ್ಗೆ ನನಗೆ ಐಡಿಯಾ ಕೊಡಬೇಕಲ್ಲ. ಇಲ್ಲವಾದರೆ, ನಿಮ್ಮ ಹೇಳಿಕೆ ಹಿಟ್ ಆಯಂಡ್ ರನ್ ಆಗುತ್ತದೆ’ ಎಂದರು. ‘ನೀವು ಆ ಸಾಲಿಗೆ ಸೇರುವುದಿಲ್ಲ ಅಂದುಕೊಂಡಿದ್ದೇನೆ’ ಎಂದು ಯತ್ನಾಳ ಹೇಳಿದರು.
‘ಸಿದ್ದರಾಮಯ್ಯ ಅವರಿಗೆ ಯತ್ನಾಳ ಆಪ್ತರು. ಅವರು ಕೇಳಿದರೆ ಹೇಳಬಹುದೇನೋ’ ಎಂದು ಉಪ ಸಬಾಧ್ಯಕ್ಷ ಆನಂದ ಮಾಮನಿ ಹೇಳಿದಾಗ, ‘ಅವರು ಅಂತಹ ಸಾಲಿಗೆ ಸೇರುವುದಿಲ್ಲ’ ಎಂದು ಯತ್ನಾಳ ಪ್ರತಿಕ್ರಿಯಿಸಿದರು.
‘ಕೆಲ ಮುಖ್ಯಮಂತ್ರಿಗಳು ತಮ್ಮ ಅವಧಿಯಲ್ಲಿ ಸ್ವಂತ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳ ಅಭಿವೃದ್ಧಿಗೆ ಹಣ ಕೊಡಲಿಲ್ಲ. ವಿಮಾನನಿಲ್ದಾಣ, ಕೃಷಿ ವಿ.ವಿ ಸೇರಿದಂತೆ ಬಹುತೇಕ ಯೋಜನೆಗಳನ್ನು ತವರು ಜಿಲ್ಲೆಗೇ ಒಯ್ದರು’ ಎಂದು ಪರೋಕ್ಷವಾಗಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.