Breaking News

ಚಹಾದಲ್ಲೂ ಕಲಬೆರಕೆ; ಕಳಪೆ ಟೀ ಪೌಡರ್

Spread the love

ಮಂಗಳೂರು: ಚಹಾ ಪ್ರಿಯರೇ ಎಚ್ಚರ! ಕಡಿಮೆ ದರದಲ್ಲಿ ಕಲಬೆರಕೆ ಚಹಾ ಪುಡಿಯನ್ನು ದೊಡ್ಡ ಮಟ್ಟದಲ್ಲಿ ವಿತರಿಸುವ ಜಾಲ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ. ಕಡಿಮೆ ದರ, ಆಕರ್ಷಕ ಬಣ್ಣಕ್ಕೆ ಮೈಮರೆತು ಅನೇಕ ಹೋಟೆಲ್, ಕ್ಯಾಂಟೀನ್ ಮಾಲೀಕರು ಇದನ್ನು ಖರೀದಿಸುತ್ತಾರೆ.

ಈ ಕಳಪೆ ಚಹಾ ಪುಡಿ ವಹಿವಾಟು ನ್ಯಾಯಯುತ ವಾಗಿ ಚಹಾ ಪುಡಿ ವ್ಯಾಪಾರ ಮಾಡುವವರಿಗೆ ಹೊಡೆತ ನೀಡಿದೆ.

ಎಲ್ಲೆಲ್ಲಿದೆ ದಂಧೆ?: ತಮಿಳುನಾಡಿನ ವಿರುಧುನಗರದಿಂದ ರಾಜ್ಯಕ್ಕೆ ನಕಲಿ ಟೀಪುಡಿ ಪೂರೈಕೆಯಾಗುತ್ತದೆ. ಬೆಂಗ ಳೂರು ಕಡೆಯಿಂದ ಹಲವು ಬ್ರ್ಯಾಂಡ್ ಹೆಸರಿನಲ್ಲಿ ಕಲಬೆರಕೆ ಟೀ ಪೌಡರ್ ಕರಾವಳಿಗೆ ಬರುತ್ತದೆ. ಉಡುಪಿ, ದಕ್ಷಿಣ ಕನ್ನಡದ ಬಂಟ್ವಾಳ, ವಿಟ್ಲ, ಕೇರಳದ ಗಡಿಭಾಗಗಳಲ್ಲಿ ವಿತರಣೆಯಾಗುತ್ತಿದೆ. ಆಕರ್ಷಕ ಹೆಸರುಗಳಲ್ಲಿ ಲಭ್ಯವಾಗುತ್ತಿವೆ. ಹಿಂದೆ ಸಣ್ಣ ಪ್ರಮಾಣದಲ್ಲಷ್ಟೇ ಅಲ್ಲಲ್ಲಿ ವಿತರಣೆ ಯಾಗುತ್ತಿತ್ತು. ಇತ್ತೀಚೆಗೆ 6 ತಿಂಗಳಿಂದ ಬೃಹತ್ ಪ್ರಮಾಣದ ದಂಧೆಯಾಗಿ ಮಾರ್ಪಡುತ್ತಿದೆ ಎನ್ನುತ್ತವೆ ಮೂಲಗಳು. ಈ ರೀತಿಯ ಕಳಪೆ ಟೀ ಪುಡಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ಸರಬರಾಜಾಗುತ್ತಿರುವ ಶಂಕೆ ಇದೆ.

ಕಂಪನಿ ಲೇಬಲ್ ಹಾಕಿದ: ವ್ಯಾನ್​ಗಳಲ್ಲಿ ಇಂತಹ ಚಹಾ ಪುಡಿ ಮಾರಾಟ ಮಾಡುವುದಿಲ್ಲ. ಸಬ್ ವಿತರಕರ ಮೂಲಕ ಬೇರೆ ಆಹಾರವಸ್ತುಗಳ ಲೈನ್​ಸೇಲ್ ಜತೆಯಲ್ಲೇ ಈ ಟೀ ಪೌಡರ್ ಪೊಟ್ಟಣಗಳು ಸಣ್ಣಪುಟ್ಟ ಹೋಟೆಲ್ ಸೇರುತ್ತವೆ. ಅಂಗಡಿಗಳಿಗೆ ಇವು ವಿತರಣೆಯಾಗುವುದು ಕಡಿಮೆ. ಯಾಕೆಂದರೆ ಜನರು ಇದರಲ್ಲಿರುವ ಕಲಬೆರಕೆ ವಿಚಾರ ಅರಿತುಕೊಳ್ಳುವ ಸಾಧ್ಯತೆ ಹೆಚ್ಚು. ಆದರೆ ಕಡಿಮೆ ದರದಲ್ಲಿ ಕಲರ್​ಫುಲ್ ಟೀ ಪಡೆಯುವ ಹಂಬಲದಲ್ಲಿ ಲಾಭದ ಉದ್ದೇಶದ ಕೆಲ ಹೋಟೆಲ್, ಕ್ಯಾಂಟೀನ್​ಗಳೇ ಇಂತಹ ಕಲಬೆರಕೆ ಟೀ ವಿತರಕರ ಟಾರ್ಗೆಟ್.

ಬಣ್ಣ ಸೇರಿಸುವಂತಿಲ್ಲ: ಆಹಾರ ಸುರಕ್ಷತಾ ಕಾಯ್ದೆ ಪ್ರಕಾರ ಚಹಾ ಪುಡಿಗೆ ಬಣ್ಣ ಸೇರಿಸುವಂತಿಲ್ಲ. ಅಸಲಿ ಚಹಾ ಪುಡಿಯನ್ನು ತಣ್ಣೀರಿಗೆ ಹಾಕಿ ನೋಡಿದರೆ ಅದು ಬೇಗನೆ ಬಣ್ಣ ಬಿಡಲಾರದು. ಚಹಾ ಪುಡಿಗೆ ನೀರು ಮಿಶ್ರಗೊಳಿಸಿ ಬಿಸಿ ಮಾಡಿದಾಗ ಮಾತ್ರ ನಸುವಾಗಿ ಬಣ್ಣ ಬಿಡುತ್ತದೆ. ಆದರೆ ಈ ಕಲಬೆರಕೆ ಚಹಾ ಪುಡಿಯನ್ನು ತಣ್ಣೀರಿಗೆ ಹಾಕಿ ನೋಡಿದರೆ, ತುಣುಕುಗಳು ಬಣ್ಣ ಕಳೆದುಕೊಳ್ಳುತ್ತಿರುವುದನ್ನು ಕಾಣಬಹುದು.

ಹೇಗೆ ಕಲಬೆರಕೆ?: ಸಾಮಾನ್ಯವಾಗಿ ಕೆ.ಜಿ.ಗೆ 170ರಿಂದ 180 ರೂ.ಗೆ ಚಹಾ ಪುಡಿ ವಿತರಣೆಯಾಗುತ್ತದೆ. ಆದರೆ ಕಲಬೆರಕೆ ಮಾಡುವವರು ಕಳಪೆ ಗುಣಮಟ್ಟದ ಟೀ ಪೌಡರನ್ನು ಕೆಲ ಎಸ್ಟೇಟ್​ಗಳಿಂದ 80-100 ರೂ.ಗೆ ಪಡೆಯುತ್ತಾರೆ, ಅದಕ್ಕೆ ಒಂದಷ್ಟು ಪರ್ಷಿಯನ್ ಬ್ಲೂ, ಬಿಸ್ಮಾರ್ಕ್ ಬ್ರೌನ್, ಇಂಡಿಗೋದಂತಹ ಬಣ್ಣ ಮಿಶ್ರ ಮಾಡುತ್ತಾರೆ. ಸೇವಿಸುವವರಿಗೆ ಇದರಲ್ಲಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ.


Spread the love

About Laxminews 24x7

Check Also

ನಟ ವಿಷ್ಣುವರ್ಧನ್, ನಟಿ ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸಚಿವ ಸಂಪುಟ ಸಭೆ ತೀರ್ಮಾನ

Spread the loveಬೆಂಗಳೂರು: ನಟ ವಿಷ್ಣುವರ್ಧನ್ ಹಾಗೂ ನಟಿ ಬಿ.ಸರೋಜಾದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ