ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಏಪ್ರಿಲ್ 22ರಿಂದ ಮೇ 18ರ ತನಕ ವಿವಿಧ ಪರೀಕ್ಷೆಗಳು ನಡೆಯಲಿವೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಏಪ್ರಿಲ್, ಮೇ ತಿಂಗಳಲ್ಲಿ ನಡೆಸಲು ತಯಾರಿ ನಡೆದಿತ್ತು. ಈ ಹಿಂದೆಯೂ ಪಿಯು ಬೋರ್ಡ್ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಿತ್ತು. ಆದರೆ, ಜೆಇಇ (JEE) ಪರೀಕ್ಷೆಯ ಮೊದಲನೆಯ ಸೆಷನ್ ಏಪ್ರಿಲ್ 16ರಿಂದ 21ರವರೆಗೆ ನಡೆಸಲು ವೇಳಾಪಟ್ಟಿ ಬಿಡುಗಡೆ ಆಗಿತ್ತು. ಇದೇ ವೇಳೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಏಪ್ರಿಲ್ 16ರಿಂದ ಮೇ 06ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು. ಜೆಇಇ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ದಿನಾಂಕಗಳು ಒಟ್ಟಿಗೆ ಬರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯ ಪರಿಷ್ಕರಿಸಿ, ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆಗೊಳಿಸಲಾಗಿತ್ತು.