ದಾವಣಗೆರೆ: ಸಾಮಾನ್ಯವಾಗಿ ವ್ಯಕ್ತಿ ಸಾವನ್ನಪ್ಪಿದ ನಂತರ ಗುಂಡಿ ತೋಡಿ ಮಣ್ಣು ಮಾಡ್ತಾರೆ.
ಆದರೆ ಇಲ್ಲೊಬ್ಬ ವ್ಯಕ್ತಿ ಜೀವನದಲ್ಲಿ ಜುಗುಪ್ಸೆಗೊಂಡು ತನ್ನ ಮರಣಕ್ಕೂ ಮೊದಲೇ ಸಮಾಧಿಯನ್ನು ತಯಾರಿಸಿಕೊಂಡಿದ್ದಾರೆ.
ಹರಿಹರ ತಾಲೂಕಿನ ಜರೇಕಟ್ಟೆ ಗ್ರಾಮದ ನಿವಾಸಿ ತಿಪ್ಪಣ್ಣರಾವ್ ಎಂಬುವವರು ಜೀವನದಲ್ಲಿ ಬೇಸರಗೊಂಡು ಸಾವಿನ ಮೊದಲೇ ಸಮಾಧಿ ನಿರ್ಮಾಣ ಮಾಡಿಕೊಂಡಿದ್ದಾರೆ. 70 ವರ್ಷದ ತಿಪ್ಪಣ್ಣ ಕಳೆದ ಹದಿನೈದು ವರ್ಷಗಳ ಹಿಂದೆಯೇ ಈ ಸಮಾಧಿಯನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ಮರಳಿ ಮಣ್ಣಿಗೆ ಎಂದು ಹೆಸರಿಟ್ಟಿದ್ದಾರೆ.
ಇನ್ನೊಬ್ಬರ ಹಂಗಿಗಾಗಿ ಕೈಚಾಚುವ ಬದಲು ಸಾಯುವುದೇ ಮೇಲು ಎಂಬ ಮಾತನ್ನು ಪಾಲಿಸುತ್ತಿರುವ ತಿಪ್ಪಣ್ಣರಾವ್, ಯಾರೊಬ್ಬರ ಬಳಿಯೂ ಹಣ ಪಡೆಯದೆ ತಾವೇ ದುಡಿದು ಸಮಾಧಿ ನಿರ್ಮಾಣ ಮಾಡಿಕೊಂಡಿದ್ದಾರೆ. ತಾನು ಅಸುನೀಗಿದ್ರೆ ಇದೇ ಸಮಾಧಿಯಲ್ಲಿ ಹೂಳುವಂತೆ ತಮ್ಮ ಮಕ್ಕಳಿಗೆ ಹೇಳಿದ್ದಾರೆ.