Breaking News

ಷೇರುಪೇಟೆಯ ಅರಸಿಯಾಗಿದ್ದ ಚಿತ್ರಾ ಅರೆಸ್ಟ್‌: ನಿಗೂಢ ಯೋಗಿಯ ಜತೆ ಸಂಪರ್ಕ!

Spread the love

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್‌ನ ಸರ್ವರ್ ವ್ಯವಸ್ಥೆಯನ್ನು ಖಾಸಗಿ ಕಂಪನಿ ದೆಹಲಿ ಮೂಲದ ಒಪಿಜಿ ಸೆಕ್ಯುರೀಟಿಸ್ ಪ್ರೈವೇಟ್ ಲಿಮಿಟೆಡ್​ನ ಮಾಲೀಕ ಸಂಜಯ್ ಗುಪ್ತಾ ಮತ್ತು ಪ್ರಮೋಟರ್​ಗಳು ಎನ್​ಎಸ್​ಇನ ಅನಾಮಧೇಯ ಅಧಿಕಾರಿಗಳ ಜತೆಗೂಡಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದೇ ರೀತಿ, ಮುಂಬೈನ ಎನ್​ಎಸ್​ಇನ ಅನಾಮಧೇಯ ಅಧಿಕಾರಿಗಳು 2010-12ರ ಅವಧಿಯಲ್ಲಿ ಸ್ಟಾಕ್ ಎಕ್ಸ್​ಚೇಂಜ್​ನ ಸರ್ವರ್​ಗೆ ಲಾಗಿನ್ ಆಗುವುದಕ್ಕೆ ಹೊರಗಿನ ಕಂಪನಿಗೆ ಅನುಕೂಲ ಮಾಡಿಕೊಟ್ಟಿದ್ದರು. ಈ ರೀತಿ ಮಾಡಿದ ಷೇರುಪೇಟೆಯ ಇತರ ಕಂಪನಿಗಳಿಗಿಂತ ಮೊದಲೇ ಮಾಹಿತಿ ಪಡೆಯಲು ಅವಕಾಶ ನೀಡಿದ್ದರು. ಎನ್​ಎಸ್​ಇನ ಟ್ರೇಡಿಂಗ್ ದತ್ತಾಂಶಗಳ ಪ್ರಕಾರ, ಮೊದಲು ಲಾಗಿನ್ ಆಗಿರುವ ಪ್ರಕರಣಗಳಲ್ಲಿ ಶೇಕಡ 90 ಲಾಗಿನ್ ಸಂಜಯ್ ಗುಪ್ತಾ ಹೆಸರಲ್ಲಿರುವುದಾಗಿ ಆರೋಪಿಸಲಾಗಿದೆ.

ಎಫ್‌ಐಆರ್‌ನಲ್ಲಿ ಇವರುಗಳ ವಿರುದ್ಧ ಕ್ರಿಮಿನಲ್ ಪಿತೂರಿ, ದಾಖಲೆಗಳ ನಾಶ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ಸಾಕ್ಷ್ಯವಾಗಿ ಪರಿಗಣಿಸುವುದನ್ನು ತಡೆಯುವ ಯತ್ನದ ಆರೋಪವನ್ನು ಹೊರಿಸಲಾಗಿತ್ತು. ಇತರ ಆರೋಪಗಳಲ್ಲಿ, ಭ್ರಷ್ಟಾಚಾರ ತಡೆ ಕಾಯಿದೆಯಡಿಯಲ್ಲಿ ಲಂಚ ನೀಡುವ ಮತ್ತು ಸ್ವೀಕರಿಸುವ ಆರೋಪ, ಅಧಿಕಾರದ ದುರುಪಯೋಗ, ಸಾಕ್ಷ್ಯ ನಾಶದ ಆರೋಪಗಳೂ ಇದ್ದವು. ಇವೆಲ್ಲ ಅಲ್ಲದೆ ಎಫ್‌ಐಆರ್‌ನಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯನ್ನು ಸಹ ಉಲ್ಲೇಖಿಸಲಾಗಿತ್ತು.

ಸೆಬಿ ಆಂತರಿಕ ತನಿಖೆ: ಎನ್​ಎಸ್​ಇ 2017ರಲ್ಲಿ ಐಪಿಒ ಬಿಡುಗಡೆ ಮಾಡಿ ಮಾರುಕಟ್ಟೆ ಪ್ರವೇಶಿಸಬೇಕಾಗಿತ್ತು. ಆದರೆ, ಸರ್ವರ್ ಅನ್ನು ಕೋ-ಲೊಕೇಶನ್ ಮೂಲಕ ಶೇರ್ ಮಾಡಿಕೊಂಡಿದ್ದ ಕಾರಣ ಎನ್​ಎಸ್​ಇ ಪ್ರಯತ್ನಕ್ಕೆ ಸೆಬಿ ತಡೆ ನೀಡಿತ್ತು. ಮೂರು ವರ್ಷಗಳ ತನಿಖೆ ಬಳಿಕ ಎನ್​ಎಸ್​ಇಗೆ 90 ದಶಲಕ್ಷ ಡಾಲರ್​ಗೂ ಅಧಿಕ ದಂಡ ವಿಧಿಸಿತು. ಅಲ್ಲದೆ ಆರು ತಿಂಗಳ ಅವಧಿಗೆ ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಹಣ ಸಂಗ್ರಹಿಸದಂತೆ ನಿಷೇಧ ಹೇರಿತ್ತು. ಇದನ್ನು ಎನ್​ಎಸ್​ಇ ಕೋರ್ಟ್​ನಲ್ಲಿ ಪ್ರಶ್ನಿಸಿತ್ತು. ಬಳಿಕ ಐಪಿಒ ಬಿಡುಗಡೆಗೆ ಸೆಬಿಯಿಂದ ಅನುಮತಿ ಪಡೆದಿತ್ತು. ಇದಕ್ಕಾಗಿ ಸಲ್ಲಿಸಿದ ದಾಖಲೆಗಳು ಈಗ ಸೆಬಿಯ ಪರಿಶೀಲನೆಯಲ್ಲಿವೆ.

ಚಿತ್ರಾ ರಾಮಕೃಷ್ಣ, ಎನ್​ಎಸ್​ಇನ ಇನ್ನೊಬ್ಬ ಮಾಜಿ ಸಿಇಒ ರವಿನಾರಾಯಣ್, ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆನಂದ ಸುಬ್ರಮಣಿಯನ್ ಅವರ ವಿರುದ್ಧ ಸಿಬಿಐ ಲುಕ್​ಔಟ್ ನೋಟಿಸ್ ಜಾರಿಗೊಳಿಸಿದ್ದು, ದೇಶ ಬಿಟ್ಟು ಹೋಗದಂತೆ ತಡೆ ನೀಡಿತ್ತು. ನಂತರ ಚಿತ್ರಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು, ಅದನ್ನು ಕೋರ್ಟ್‌ ವಜಾ ಮಾಡಿದೆ. ಈಗಾಗಲೇ ಪ್ರಕರಣ ಸಂಬಂಧ ಸಿಬಿಐ ಎನ್‌ಎಸ್‌ಇಯ ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆನಂದ್ ಸುಬ್ರಮಣಿಯನ್ ಅವರನ್ನು ಕೆಲ ದಿನಗಳ ಹಿಂದೆ ಚೆನ್ನೈನಲ್ಲಿ ಬಂಧಿಸಲಾಗಿದೆ.

ನಿಗೂಢ ಯೋಗಿಯ ಜತೆ ಸಂಪರ್ಕ!
ಕುತೂಹಲದ ವಿಷಯ ಏನೆಂದರೆ, ಚಿತ್ರಾ ಅವರಿಗೆ ಹಿಮಾಲಯದ ನಿಗೂಢ ಯೋಗಿಯ ಜತೆ ಸಂಪರ್ಕ ಇದ್ದುದು ಸೆಕ್ಯುರಿಟೀಸ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ತನಿಖೆಯಿಂದ ತಿಳಿದುಬಂದಿದೆ.
ಹಿಮಾಲಯದಲ್ಲಿ ವಾಸಿಸುವ ಯೋಗಿ ಎಂದು ಹೇಳಲಾಗುವ ವ್ಯಕ್ತಿಯೊಂದಿಗೆ ಇಮೇಲ್ ಮೂಲಕ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್‌ನ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎನ್ನುವ ಆರೋಪ ಇವರ ಮೇಲಿದೆ. ಈ ತಿಂಗಳ ಆರಂಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಆನಂದ್ ಸುಬ್ರಮಣ್ಯಂ ಅವರೇ ಈ ಯೋಗಿ ಎಂಬ ಶಂಕೆ ವ್ಯಕ್ತವಾಗಿದ್ದು ಈ ಬಗ್ಗೆ ಇನ್ನಷ್ಟೇ ಸತ್ಯ ಹೊರಬರಬೇಕಿದೆ.

2013ರ ಏಪ್ರಿಲ್‌ನಲ್ಲಿ ಮುಖ್ಯ ಕಾರ್ಯತಂತ್ರದ ಸಲಹೆಗಾರರಾಗಿ ಸೇರಿದ ಆನಂದ್ ಸುಬ್ರಮಣ್ಯಂ ಅವರು, 2015-16ರಲ್ಲಿ ಎನ್‌ಎಸ್‌ಇಯ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಚಿತ್ರಾ ರಾಮಕೃಷ್ಣ ಅವರ ಸಲಹೆಗಾರರಾಗಿದ್ದರು. ಆನಂದ್‌ ಅವರನ್ನು ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಎಂಡಿ ಸಲಹೆಗಾರರಾಗಿ ನೇಮಿಸಲು ಚಿತ್ರಾ ಅವರು ಹಿಮಾಲಯ ಶ್ರೇಣಿಗಳಲ್ಲಿ ವಾಸಿಸುವ ನಿಗೂಢ ಯೋಗಿಯಿಂದ ಮಾರ್ಗದರ್ಶನ ಪಡೆದರು ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ಹೇಳಿದ ನಂತರ ಚಿತ್ರಾ ರಾಮಕೃಷ್ಣ ರಾಷ್ಟ್ರದ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿದ್ದರು.

ಷೇರುಪೇಟೆಯ ಯಾವುದೇ ಹೆಚ್ಚಿನ ಅನುಭವ ಇಲ್ಲದೇ ಇದ್ದರೂ ಆನಂದ್‌ ಅವರನ್ನು ಚಿತ್ರಾ ಅವರು ಹಿರಿಯ ಹುದ್ದೆಗೆ ನೇಮಕ ಮಾಡಿಕೊಂಡಿದ್ದರು. ಜೊತೆಗೆ ಅವರಿಗೆ ಹಲವು ಬಾರಿ ಪದೋನ್ನತಿ ನೀಡಲಾಗಿತ್ತು. ವಿನಾಕಾರಣ ವೇತನ ಹೆಚ್ಚಳ ಮಾಡಲಾಗಿತ್ತು. ಈ ಅವಧಿಯಲ್ಲಿಯೇ ಅವ್ಯವಹಾರಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಹಿಮಾಲಯದ ಯೋಗಿಯ ಕುರಿತು ಇನ್ನಷ್ಟು ಸತ್ಯವನ್ನು ತನಿಖಾಧಿಕಾರಿಗಳು ಕಂಡುಹಿಡಿಯುತ್ತಿದ್ದಾರೆ.


Spread the love

About Laxminews 24x7

Check Also

ಭೂಮಿ‌ ಇರೋವರೆಗೂ ಬಸವಣ್ಣನವರ ವಿಚಾರಧಾರೆಗಳನ್ನ ಕಾಪಾಡಬೇಕು: ಬಸವ ಸಂಸ್ಕೃತಿ ಅಭಿಯಾನದಲ್ಲಿ ಸತೀಶ ಜಾರಕಿಹೊಳಿ

Spread the loveಬೆಳಗಾವಿ: “ಭೂಮಿ ಇರುವವರೆಗೆ ಬಸವಣ್ಣನವರ ವಿಚಾರಗಳನ್ನು ಕಾಪಾಡುವ ಪ್ರಯತ್ನ ಮಾಡಬೇಕಿದೆ. ದೇಶದಲ್ಲಿ ಮೂಲ ವಿಚಾರ ಮತ್ತು ಇತಿಹಾಸವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ