ನವದೆಹಲಿ: ಉಕ್ರೇನ್ ವಿರುದ್ಧ ರಷ್ಯಾ ಭೀಕರ ಯುದ್ಧ ನಡೆಸುತ್ತಿದ್ದು, ಅಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಭಾರತ ಅವರೆಲ್ಲರನ್ನೂ ಸ್ಥಳಾಂತರಿಸುವ ಕಾರ್ಯ ಮಾಡುತ್ತಿದ್ದರೂ ಹಲವರು ಇನ್ನೂ ಯುದ್ಧದ ಪರಿಸ್ಥಿತಿಯಿಂದ ತಪ್ಪಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಮಟ್ಟದಲ್ಲಿ ಕದನ ವಿರಾಮ ಘೋಷಿಸುವಂತೆ ರಷ್ಯಾ ಹಾಗೂ ಉಕ್ರೇನ್‌ಗೆ ಭಾರತ ಮನವಿ ಮಾಡಿದೆ.
ಉಕ್ರೇನ್‌ನಲ್ಲಿ ಫಿರಂಗಿ ದಾಳಿ ನಡೆಯುತ್ತಿದೆ. ಅಲ್ಲಿನ ಪರಿಸ್ಥಿತಿ ಅಪಾಯಕಾರಿಯಾಗಿದ್ದು, ಇಂತಹ ಸನ್ನಿವೇಶದಲ್ಲಿ ನಮ್ಮ ವಿದ್ಯಾರ್ಥಿಗಳು ಪ್ರಯಾಣಿಸುವುದು ನಮಗೆ ಇಷ್ಟವಿಲ್ಲ. ಅವರ ಪ್ರಯಾಣಕ್ಕೆ ಸುರಕ್ಷಿತ ಮಾರ್ಗ ಬೇಕು. ಆಗ ಮಾತ್ರ ನಾವು ವಿದ್ಯಾರ್ಥಿಗಳನ್ನು ಸ್ಥಳಾಂತರಿಸಬಹುದು ಎಂದು ಭಾರತ ತಿಳಿಸಿದೆ.
ವಿದ್ಯಾರ್ಥಿಗಳ ಸ್ಥಳಾಂತರಕ್ಕಾಗಿ ಎರಡೂ ಕಡೆಯವರು ಸ್ಥಳೀಯ ಕದನ ವಿರಾಮ ಘೋಷಿಸಿ ಎಂದು ಭಾರತ ರಷ್ಯಾ ಹಾಗೂ ಉಕ್ರೇನ್‌ಗೆ ಮನವಿ ಮಾಡಿದೆ.
ಖಾರ್ಕಿವ್‌ನಲ್ಲಿ 300 ಭಾರತೀಯರು ಹಾಗೂ ಸುಮಿಯಲ್ಲಿ 700 ಭಾರತೀಯರು ಸಿಲುಕಿರುವುದಾಗಿ ವರದಿಗಳು ತಿಳಿಸಿವೆ. ಇದೀಗ ಉಕ್ರೇನ್‌ನಲ್ಲಿ ಒಟ್ಟು 2,000 ದಿಂದ 3,000 ಭಾರತೀಯರು ಸಿಲುಕಿರುವುದಾಗಿ ಅಂದಾಜಿಸಲಾಗಿದೆ.