ಮೈಸೂರು: ಆಟೊವೊಂದರಲ್ಲಿ ಅಕ್ರಮವಾಗಿ ಗಾಂಜಾವನ್ನಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಂಚವಳ್ಳಿ ಗ್ರಾಮದ ಸೈಯದ್ ಯೂನಸ್ ಮತ್ತು ಮಂಗಳೂರು ಮಾಳ ಗ್ರಾಮದ ಮಹದೇವ ಬಂಧಿತರು, ಯೂನಸ್ ಮಾರಾಟ ಮಾಡುತ್ತಿದ್ದವನಾಗಿದ್ದು, ಈತನ ಬಳಿಗೆ ಮಹದೇವ ಖರೀದಿಗೆ ಬಂದಿದ್ದನು ಎಂದು ಹೇಳಲಾಗಿದೆ.
ಆರೋಪಿ ಯೂನಸ್ ಹನಗೋಡು ಹೋಬಳಿಯ ದೇವರಾಜಕಾಲೋನಿ ಗೇಟ್‌ನಿಂದ ಹನಗೋಡು ಕಡೆಗೆ ಹೋಗುವ ರಸ್ತೆಯಲ್ಲಿ ಕೆಎ 12 ಎ 2439 ನಂಬರಿನ ಆಟೋದಲ್ಲಿ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿ ಬಂದಿತ್ತು ಹೀಗಾಗಿ ಹುಣಸೂರು ಉಪವಿಭಾಗದ ಡಿವೈಎಸ್ಪಿ ರವಿಪ್ರಸಾದ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣಾ ಇನ್ಸ್‌ಪೆಕ್ಟರ್ ಚಿಕ್ಕಸ್ವಾಮಿರವರ ನೇತೃತ್ವದಲ್ಲಿ ಸಿಬ್ಬಂದಿ ಲಿಖಿತ್, ಹರೀಶ್, ನಹಿಂಪಾಷ ಹಾಗೂ ಮೆಹರಾಜ್ ಅಹಮ್ಮದ್ ದಾಳಿ ಮಾಡಿ ಆರೋಪಿ ಸೈಯದ್ ಯೂನಸ್ ನನ್ನು ಬಂಧಿಸಿದ್ದಾರೆ. ಬಂಧಿತ ಆಟೋದಲ್ಲಿ ಮಾರಾಟ ಮಾಡಲಿಟ್ಟಿದ್ದ ಒಂದು ಕೆ.ಜಿ. ನೂರು ಗ್ರಾಂ ಒಣ ಗಾಂಜಾ ಸೊಪ್ಪನ್ನು ಹಾಗೂ ಗಾಂಜಾ ಸೊಪ್ಪನ್ನು ಖರೀದಿಸಲು ಬಂದಿದ್ದ ಮಂಗಳೂರು ಮಾಳ ಗ್ರಾಮದ ಮಹದೇವ ಎಂಬಾತನನ್ನು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7